ಶಿಮ್ಲಾ: ಮಧ್ಯಪ್ರದೇಶಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ವಾಗತ ಕೋರಿದ್ದನ್ನು ನೋಡಿದ್ದರೆ, ಅವರು ವಾಪಸ್ ಮನೆಗೆ ಮರಳುವ ಸಿದ್ಧತೆಯಲ್ಲಿ ಇದ್ದಾರೆ ಎಂದೆನಿಸುತ್ತದೆ ಎಂದು ಎಐಸಿಸಿ ವಕ್ತಾರ, ಹಿಮಾಚಲ ಪ್ರದೇಶ ಕಾಂಗ್ರೆಸ್ ಪ್ರದೇಶ ಸಮಿತಿ ಅಧ್ಯಕ್ಷ ಕುಲದೀಪ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಬುಧವಾರ ಮುಂಜಾನೆ (ನವೆಂಬರ್ 23) ಮಧ್ಯಪ್ರದೇಶಕ್ಕೆ ಕಾಲಿಟ್ಟಿದೆ. ಹೀಗೆ ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ ಕಾಲಿಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಮಧ್ಯಪ್ರದೇಶಕ್ಕೆ ಯಾರೇ ಬಂದರೂ ಅವರಿಗೆ ಸ್ವಾಗತ’ ಎಂದು ಹೇಳಿದ್ದರು. ಅದನ್ನೇ ಉಲ್ಲೇಖಿಸಿ, ಕುಲದೀಪ್ ಸಿಂಗ್ ರಾಥೋಡ್ ಈ ಮಾತುಗಳನ್ನಾಡಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮೊದಲು ಕಾಂಗ್ರೆಸ್ನಲ್ಲಿ ಇದ್ದವರು. 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ಬಳಿಕ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ಅವರೀಗ ಕೇಂದ್ರ ವಿಮಾನಯಾನ ಇಲಾಖೆ ಮತ್ತು ಉಕ್ಕು ಸಚಿವಾಲಯದ ಹೊಣೆ ಹೊತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶಕ್ಕೆ ಬಂದಾಗ ಅವರು ‘ಯಾರೇ ಬಂದರೂ ಸ್ವಾಗತ’ ಎಂದಿದ್ದು, ಮರಳಿ ಕಾಂಗ್ರೆಸ್ಗೆ ಕಾಲಿಡುವ ಸೂಚನೆ ಎಂದು ಕುಲದೀಪ್ ರಾಥೋಡ್ ವಿಶ್ಲೇಷಿಸಿದ್ದಾರೆ.
ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ನಡೆದ ಹಿಮಾಚಲ ಪ್ರದೇಶದ ಬಗ್ಗೆ ಮಾತನಾಡಿದ ಕುಲದೀಪ್ ಸಿಂಗ್ ರಾಥೋಡ್, ‘ಗುಡ್ಡಗಾಡು ರಾಜ್ಯವಾದ ಹಿಮಾಚಲ ಪ್ರದೇಶದ ಜನರು ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಬಾರಿ ಚುನಾವಣೆಯಲ್ಲಿ ಜನ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಖಂಡಿತ ನಮ್ಮ ಪಕ್ಷವೇ ಸರ್ಕಾರ ರಚನೆ ಮಾಡಲಿದೆ ಎಂದೂ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Video | ಭಾರತ್ ಜೋಡೋ ಯಾತ್ರೆಯಲ್ಲಿ ಮೊಳಗಿದ ನೇಪಾಳ ರಾಷ್ಟ್ರಗೀತೆ; ಮುಖಮುಖ ನೋಡಿಕೊಂಡ ಕಾಂಗ್ರೆಸ್ ನಾಯಕರು!