Site icon Vistara News

K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ

K Annamalai Kirik with lady reporter, The BJP leader was furious at her question

ಚೆನ್ನೈ: ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ, ಬಿಜೆಪಿ ತಮಿಳುನಾಡು (Tamil Nadu BJP) ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರ ಎಡವಟ್ಟುಗಳು ನಿಲ್ಲುವಂತೆ ಕಾಣುತ್ತಿಲ್ಲ. ಎಐಎಡಿಎಂಕೆ (AIADMK Party) ಪಕ್ಷದ ಉನ್ನತ ನಾಯಕರನ್ನೇ ಟೀಕಿಸಿ, ತಮಿಳುನಾಡಿನಲ್ಲಿ ಮೈತ್ರಿ ಮುರಿಯಲು ಕಾರಣವಾದ ಅಣ್ಣಾಮಲೈ ಇದೀಗ, ಮಹಿಳಾ ರಿಪೋರ್ಟರ್ (Lady Reporter) ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಅಣ್ಣಾಮಲೈ ಅವರ ವರ್ತನೆಗೆ ಪತ್ರಕರ್ತರು ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ, ಪ್ರತಿಪಕ್ಷಗಳು ಬಿಜೆಪಿಯ ವಿರುದ್ದ ಕೆಂಡ ಕಾರಿವೆ(Opposition Parties).

ನನ್ನ ನೆಲ ನನ್ನ ಜನ ಪಾದಯಾತ್ರೆಯನ್ನು ನಡೆಸುತ್ತಿರುವ ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಬದಲಿಗೆ, ಪ್ರಶ್ನೆ ಕೇಳಿದೆ ವರದಿಗಾರ್ತಿಯನ್ನು ತಮ್ಮ ಪಕ್ಕಕ್ಕೆ ಬರುವಂತೆ ಒತ್ತಾಯಿಸಿದರು. ಅಲ್ಲದೇ, ಇಂಥ ಪ್ರಶ್ನೆ ಕೇಳಿದ ವರದಿಗಾರ್ತಿಯನ್ನು ಎಲ್ಲರೂ ನೋಡಲಿ ಎಂದು ಹೇಳಿದರು. ಅಣ್ಣಾಮಲೈ ಅವರ ವರ್ತನೆಗೆ ಸ್ಥಳದಲ್ಲಿ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದಾದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ, ವರದಿಗಾರ್ತಿಗೆ ತಮ್ಮ ಪಕ್ಕಕ್ಕೆ ಬಂದು, ಕ್ಯಾಮೆರಾ ಮುಖ ತೋರಿಸುವಂತೆ ಒತ್ತಾಯಿಸುತ್ತಿದ್ದರು.

ಮಹಿಳಾ ರಿಪೋರ್ಟರ್ ಕೇಳಿದ ಪ್ರಶ್ನೆ ಯಾವುದು?

ಒಂದು ವೇಳೆ ನೀವು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲದಿದ್ದರೆ ಬಿಜೆಪಿಯಲ್ಲೇ ಮುಂದುವರಿಯುತ್ತೀರಾ ಎಂದು ಮಹಿಳಾ ರಿಪೋರ್ಟರ್ ಅಣ್ಣಾಮಲೈ ಅವರಿಗೆ ಕೇಳಿದರು. ಈ ಪ್ರಶ್ನೆಗೆ ರೇಗಿದ ಅಣ್ಣಾಮಲೈ ಅವರು ತಮ್ಮ ಪಕ್ಕಕ್ಕೆ ಬರುವಂತೆ ವರದಿಗಾರ್ತಿಗೆ ಒತ್ತಾಯಿಸಿದರು.

ಬಾ(ವರದಿಗಾರ್ತಿಯನ್ನು ಉದ್ದೇಶಿಸಿ) ನನ್ನ ಪಕ್ಕದಲ್ಲಿ ನಿಲ್ಲು. ನನಗೆ ಇಂತಹ ಪ್ರಶ್ನೆಯನ್ನು ಯಾರು ಕೇಳಿದ್ದಾರೆ ಎಂದು ಜನರು ಟಿವಿ ಮೂಲಕ ನೋಡಲಿ. ಪ್ರಶ್ನೆಗಳನ್ನು ಕೇಳಲು ಒಂದು ಮಾರ್ಗವಿದೆ. ಅಂತಹ ಅದ್ಭುತ ಪ್ರಶ್ನೆಯನ್ನು ಕೇಳಿದ ವ್ಯಕ್ತಿಯನ್ನು ಎಂಟು ಕೋಟಿ ಜನರಿಗೆ ತಿಳಿದಿರಬೇಕು ಕೆ ಅಣ್ಣಾಮಲೈ ಅವರು ಹೇಳಿದರು.

ಅಣ್ಣಾಮಲೈ ಅವರು ಪದೇ ಪದೇ ಮಹಿಳಾ ವರದಿಗಾರರಿಗೆ ಕ್ಯಾಮೆರಾಗಳ ಮುಂದೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಂತೆ, ಸಹ ಪತ್ರಕರ್ತರು ಆಕ್ಷೇಪಿಸಿದರು. ಆಗ ಅವರು, ನಾನು ಪೂರ್ಣಾವಧಿ ರಾಜಕಾರಣಿ ಅಲ್ಲ, ರೈತನಾಗಿರುವುದು ನನ್ನ ಹೆಮ್ಮೆ. ಮೊದಲು ರೈತ ಆ ಬಳಿಕ ನಾನು ರಾಜಕಾರಣಿ. ಬಳಿಕ ನಾನು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Annamalai : ಅಣ್ಣಾಮಲೈ ವಿರುದ್ಧ ಸಿಎಂ ಸ್ಟಾಲಿನ್‌ ಮಾನನಷ್ಟ ಮೊಕದ್ದಮೆ, ಏನಿದು ಕೇಸ್?

ಅಣ್ಣಾಮಲೈ ಅವರ ನಡವಳಿಕೆಯನ್ನು ಕೊಯಮತ್ತೂರು ಪ್ರೆಸ್ ಕ್ಲಬ್ ಖಂಡಿಸಿದೆ. ಪತ್ರಿಕೋದ್ಯಮದ ಮೌಲ್ಯಗಳ ಬಗ್ಗೆ ಉಪದೇಶ ನೀಡುವ ಮೊದಲು ಅಣ್ಣಾಮಲೈ ಅವರು ನಾಯಕರಾಗಿ ಯಾವ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು, ಮತ್ತೊಬ್ಬರನ್ನು ಹೇಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಲಿ. ಸಾರ್ವಜನಿಕ ಜೀವನದಲ್ಲಿರುವವರು ಮತ್ತು ನಾಗರಿಕರ ನಡುವೆ ಸೇತುವೆ ರೀತಿಯಲ್ಲಿ ಪತ್ರಿಕೋದ್ಯಮ ಕೆಲಸ ಮಾಡುತ್ತದೆ ಎಂದು ಕೊಯಮತ್ತೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎ ಆರ್ ಬಾಬು ಅವರು ಹೇಳಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಅಣ್ಣಾಮಲೈ ಅವರ ವರ್ತನೆಯನ್ನು ಖಂಡಿಸಿವೆ. ಇಂಥ ಅಹಂಕಾರವನ್ನು ನಾನೆಂದೂ ನೋಡಿಲ್ಲ. ಜಯಲಲಿತಾ, ಮೋದಿ ಅಥವಾ ಶಾ ಅವರಲ್ಲೂ ನಾನು ಇಂಥ ಅಹಂಕಾರವನ್ನು ಕಂಡಿಲ್ಲ. ಈ ಮನುಷ್ಯ(ಅಣ್ಣಾಮಲೈ), ಮಾನವ ಕುಲಕ್ಕೆ ದೇವರ ಕಾಣಿಕೆ ಎಂದು ಭಾವಿಸಿಕೊಂಡಿದ್ದಾನೆ ಎಂದು ಕಾಂಗ್ರೆಸ್‌ನ ಲಕ್ಷ್ಮೀ ರಾಮಚಂದ್ರನ್ ಅವರು ಟ್ವೀಟ್ ಮಾಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version