ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ಬಂಧನದಲ್ಲಿರುವ ಭಾರತ ರಾಷ್ಟ್ರ ಸಮಿತಿ (BRS) ನಾಯಕಿ, ವಿಧಾನ ಪರಿಷತ್ ಸದಸ್ಯೆ (MLC) ಕೆ. ಕವಿತಾ (K Kavitha) ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಸೋಮವಾರ ಆರೋಪ ಪಟ್ಟಿ ಸಲ್ಲಿಸಿದೆ. ಕವಿತಾ ಅವರು ಸುಮಾರು 292.8 ಕೋಟಿ ರೂ. ಮೌಲ್ಯದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದೆ. ಜತೆಗೆ ಈ ಹಗರಣದಲ್ಲಿ ಒಟ್ಟು 1,100 ಕೋಟಿ ರೂ.ಗಿಂತ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದೂ ತಿಳಿಸಿದೆ.
ದೆಹಲಿ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ ಕಾವೇರಿ ಬೆವೇಜಾ ಅವರ ಮುಂದೆ ಪೂರಕ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ್ದು, ಕವಿತಾ ಅವರ ನ್ಯಾಯಾಂಗ ಬಂಧನವನ್ನು ಜುಲೈ 3ರವರೆಗೆ ವಿಸ್ತರಿಸಲಾಗಿದೆ. ಜತೆಗೆ ಪ್ರಿನ್ಸ್, ದಾಮೋದರ್ ಮತ್ತು ಅರವಿಂದ್ ಸಿಂಗ್ ಎಂಬ ಮೂವರು ಸಹ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.
#WATCH | BRS leader K Kavitha brought to Rouse Avenue Court in Delhi.
— ANI (@ANI) June 3, 2024
She is being produced here at the end of her Judicial Custody period in ED case related to Delhi Excise Case. pic.twitter.com/oG64XRTmQF
ಇಲ್ಲಿಯ ತನಕ ನಡೆದ ತನಿಖೆಯ ಪ್ರಕಾರ ಒಟ್ಟು 1,100 ಕೋಟಿ ರೂ. ಮೊತ್ತದ ಹಗರಣ ನಡೆದಿರುವುದು ಕಂಡು ಬಂದಿದೆ. ಕವಿತಾ, ಚಂಪ್ರೀತ್ ಸಿಂಗ್, ಪ್ರಿನ್ಸ್ ಕುಮಾರ್, ದಾಮೋದರ್ ಶರ್ಮಾ ಮತ್ತು ಅರವಿಂದ್ ಸಿಂಗ್ ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. ಈ ಪೈಕಿ ಕವಿತಾ ಅವರು 292.8 ಕೋಟಿ ರೂ.ಗಳ ಪಿಒಸಿ (Money generated and laundered in crime)ಯಲ್ಲಿ ಭಾಗಿಯಾಗಿದ್ದಾರೆ. 100 ಕೋಟಿ ರೂ.ಗಳ ಕಿಕ್‌ಬ್ಯಾಕ್ ಅನ್ನು ಎಎಪಿ ನಾಯಕರಿಗೆ ನೀಡಲಾಗಿದೆ. ಮಾತ್ರವಲ್ಲ ಕವಿತಾ ಅವರು ಮೊಬೈಲ್‌ನಲ್ಲಿದ್ದ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ ಎಂದೂ ದೂರಲಾಗಿದೆ.
ಆರೋಪಿ ವಿಜಯ್ ನಾಯರ್ (ಎಎಪಿಯ ಉನ್ನತ ನಾಯಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ) ಮೂಲಕ ಕವಿತಾ ಅವರು ಸೌತ್ ಗ್ರೂಪ್ ಸದಸ್ಯರು ಮತ್ತು ಎಎಪಿ ನಾಯಕರೊಂದಿಗೆ ಸೇರಿ 100 ಕೋಟಿ ರೂ.ಗಳನ್ನು ಪಾವತಿಸಲು ಮತ್ತು ಅನಗತ್ಯ ಪ್ರಯೋಜನಗಳನ್ನು ಪಡೆಯಲು ಸಂಚು ರೂಪಿಸಿದ್ದರು ಎಂದು ವಿವರಿಸಲಾಗಿದೆ.
ಪ್ರಕರಣದ ಹಿನ್ನೆಲೆ
ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಮಾರ್ಚ್ 15 ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೀಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.
ಇದನ್ನೂ ಓದಿ: Liquor Policy Case : ಆಪ್ ನಾಯಕರಿಗೆ ಕವಿತಾ 100 ಕೋಟಿ ಲಂಚ ಕೊಟ್ಟಿದ್ದು ಹೌದು; ಇಡಿ ಮಾಹಿತಿ
ಸೌತ್ ಗ್ರೂಪ್ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ.