ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಜಾರ್ಖಂಡ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ್ ಖರ್ಗೆಯವರು ಸಲ್ಲಿಸಿದ್ದ ನಾಮಪತ್ರಗಳು ಮಾನ್ಯವಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್ ಉಳಿದುಕೊಂಡಿದ್ದಾರೆ. ಈ ಮೂವರು ಸೆ.30ರಂದು ನಾಮಪತ್ರ ಸಲ್ಲಿಸಿದ್ದರು.
ಸೆ.30ರಂದು ನಾಮಪತ್ರ ಸಲ್ಲಿಸುವಾಗ ಖರ್ಗೆ ಅವರು 14, ಶಶಿ ತರೂರ್ ಐದು ಮತ್ತು ತ್ರಿಪಾಠಿ ಒಂದು ಅರ್ಜಿ ಸಲ್ಲಿಸಿದ್ದರು. ಒಟ್ಟು 20ರಲ್ಲಿ ನಾಲ್ಕು ತಿರಸ್ಕೃತಗೊಂಡಿವೆ. ಕೆ.ಎನ್.ತ್ರಿಪಾಠಿಯವರು ಸಲ್ಲಿಸಿದ್ದ ಒಂದು ಅರ್ಜಿಯೂ ಅಸಿಂಧುಗೊಂಡಿದ್ದರಿಂದ ಅವರ ನಾಮಪತ್ರವೇ ಅಮಾನ್ಯಗೊಂಡಿದೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂಧನ್ ಮಿಸ್ತ್ರಿ ತಿಳಿಸಿದ್ದಾರೆ. ಕೆ.ಎನ್.ತ್ರಿಪಾಠಿ ನಾಮಪತ್ರಕ್ಕೆ ಒಬ್ಬ ಅನುಮೋದಕರು ಹಾಕಿರುವ ಸಹಿ ಹೊಂದಾಣಿಕೆ ಆಗುತ್ತಿಲ್ಲ, ಇನ್ನೊಬ್ಬ ಅನುಮೋದಕರ ಸಹಿ ಪುನರಾವರ್ತನೆಯಾಗಿದೆ. ಹೀಗಾಗಿ ನಾಮಪತ್ರ ಅಮಾನ್ಯಗೊಂಡಿದೆ ಎಂದೂ ಮಿಸ್ತ್ರಿ ತಿಳಿಸಿದ್ದಾರೆ.
ಇದನ್ನೂ ಓದಿ: Cong Prez Poll | ರಾಜ್ಯಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ