Site icon Vistara News

Narendra Modi: ಕಾಂಗ್ರೆಸ್‌ ಉಚ್ಚಾಟಿಸಿದ ಧಾರ್ಮಿಕ ಗುರುವನ್ನು ಹೊಗಳಿದ ಮೋದಿ!

Narendra Modi And Acharya Pramod Krishnam

Kalki Dham Temple: PM Narendra Modi lauds expelled Congress leader Acharya Pramod Krishnam

ಲಖನೌ: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ದೇಶದ ಮೊದಲ ಕಲ್ಕಿ ಧಾಮ ದೇವಾಲಯಕ್ಕೆ (Kalki Dham Temple) ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಕಾಂಗ್ರೆಸ್‌ ಉಚ್ಚಾಟಿತ ನಾಯಕರೂ ಆಗಿರುವ ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ ಚೇರ್ಮನ್‌ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರನ್ನು ಹೊಗಳಿದರು. ಶಂಕುಸ್ಥಾಪನೆ ಬಳಿಕ ಮಾತನಾಡಿದ ನರೇಂದ್ರ ಮೋದಿ, “ಆಚಾರ್ಯ ಪ್ರಮೋದ್‌ ಕೃಷ್ಣಂ ಅವರ ಶ್ರಮ ಹಾಗೂ ಹೋರಾಟದ ಫಲವಾಗಿ ಕಲ್ಕಿ ದೇವಾಲಯ ನಿರ್ಮಾಣವಾಗುತ್ತಿದೆ” ಎಂದರು.

“ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕೆ ಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

“ಎಲ್ಲರಿಗೂ ಕೊಡಲು ಶಕ್ತಿ ಇರುತ್ತದೆ. ಅವರ ಬಳಿ ಏನಾದರೂ ಕೊಡಲು ಇರುತ್ತದೆ. ಆದರೆ, ನನ್ನ ಬಳಿ ಭಾವನೆಗಳ ಹೊರತಾಗಿ ಏನೂ ಇಲ್ಲ ಎಂಬುದಾಗಿ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಹೇಳಿದರು. ಪ್ರಮೋದ್‌ ಅವರೇ, ನೀವು ನನಗೆ ಏನನ್ನೂ ಕೊಡಬೇಕಿಲ್ಲ. ಕೊಡದಿರುವುದೇ ತುಂಬ ಒಳ್ಳೆಯದು. ಏಕೆಂದರೆ ಈಗ ಸಮಯ ಬದಲಾಗಿದೆ. ನೀವು ಏನನ್ನಾದರೂ ಕೊಟ್ಟರೆ, ಅದನ್ನು ಭ್ರಷ್ಟಾಚಾರ ಎಂದು ಬಿಡುತ್ತಾರೆ. ನೀವು ನನ್ನ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕೊಂಡಿರುವುದೇ ಸಾಕು” ಎಂಬುದನ್ನು ಸುಧಾಮನ ಉದಾಹರಣೆ ಮೂಲಕ ಮೋದಿ ಹೇಳಿದರು.

ಇದನ್ನೂ ಓದಿ: Kalki Dham Temple: ಒಳ್ಳೆಯ ಕೆಲಸಗಳು ನನಗೆಂದೇ ಮೀಸಲಿವೆ, ಮಾಡುವೆ ಎಂದ ಮೋದಿ

“ನಾವು ವಿಕಾಸವನ್ನೂ ಕೈಗೊಳ್ಳುತ್ತೇವೆ, ವಿರಾಸತ್‌ಅನ್ನೂ (ಪರಂಪರೆ) ಪಾಲಿಸುತ್ತೇವೆ. ಕೇದಾರನಾಥ ಧಾಮದ ಪುನರುಜ್ಜೀವನ, ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಿಸಲಾಗುತ್ತಿದೆ. ಹಾಗೆಯೇ, ದೇಶದ ಏಳಿಗೆಗೆ ನಾವು ಆದ್ಯತೆ ನೀಡುತ್ತೇವೆ. ವಿದೇಶಿ ಹೂಡಿಕೆ ಹರಿದು ಬರುತ್ತಿದೆ, ಉತ್ತಮ ರಸ್ತೆಗಳು ದೇಶದ ಚಹರೆಯನ್ನು ಬದಲಿಸುತ್ತಿವೆ. ದೇಶದಲ್ಲೇ ಮೊದಲು ಬುಲೆಟ್‌ ರೈಲು ಓಡುವ ದಿನಗಳು ತುಂಬ ಹತ್ತಿರದಲ್ಲಿವೆ. ವಂದೇ ಭಾರತ್‌ ರೈಲುಗಳು ಓಡಾಡುತ್ತಿವೆ. ಡಿಜಿಟಲ್‌ ತಂತ್ರಜ್ಞಾನವು ದೇಶವನ್ನು ಮುನ್ನಡೆಸುತ್ತಿದೆ. ವಿಶ್ವದಲ್ಲೇ ಇಂದು ಭಾರತ ಮಿನುಗುತ್ತಿದೆ. ಕಾಲ ಈಗ ಬದಲಾಗಿದೆ. ರಾಮಮಂದಿರ ನಿರ್ಮಾಣವು ಸಾವಿರ ವರ್ಷಗಳ ರಾಮರಾಜ್ಯಕ್ಕೆ ಸಂಕೇತವಾಗಲಿದೆ” ಎಂದು ಹೇಳಿದರು.

ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಇವರನ್ನು ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version