Site icon Vistara News

Kalki Dham Temple: ಒಳ್ಳೆಯ ಕೆಲಸಗಳು ನನಗೆಂದೇ ಮೀಸಲಿವೆ, ಮಾಡುವೆ ಎಂದ ಮೋದಿ

Narendra Modi

Today If Sudama Gave Rice To Krishna SC Would Dub It Corruption: PM Narendra Modi's Dig At Top Court

ಲಖನೌ: ದೇಶದ ಮೊದಲ ಕಲ್ಕಿ ದೇವಾಲಯ ನಿರ್ಮಾಣಕ್ಕೆ (Kalki Dham Temple) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ (Sambhal District) ಕಲ್ಕಿ ದೇವಾಲಯ ನಿರ್ಮಾಣ ಮಾಡುತ್ತಿದ್ದು, ಐದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಶಂಕುಸ್ಥಾಪನೆ ಬಳಿಕ ಮಾತನಾಡಿದ ಮೋದಿ, “ದೇಶದ ಜನರು, ಉತ್ತರ ಪ್ರದೇಶದ ಭಕ್ತಿಯ ಅಸ್ಮಿತೆಯಾಗಿ ಕಲ್ಕಿ ಧಾಮ ಮಂದಿರವು ತಲೆ ಎತ್ತಲಿದೆ” ಎಂದು ಹೇಳಿದರು.

“ಕಲ್ಕಿ ಧಾಮ ದೇವಾಲಯವು 18 ವರ್ಷಗಳ ಕನಸು ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಹೇಳಿದರು. ಆದರೆ, ಕೆಲವೊಂದು ಒಳ್ಳೆಯ ಕೆಲಸಗಳು ನನಗಾಗಿಯೇ ಮೀಸಲಾಗಿವೆ ಎಂಬುದಾಗಿ ಅನಿಸುತ್ತದೆ. ಜನರು, ಸಾಧು-ಸಂತರ ಆಶೀರ್ವಾದವು ನನ್ನ ಮೇಲೆ ಇರುವವರೆಗೆ ಇನ್ನಷ್ಟು ಒಳ್ಳೆಯ ಕೆಲಸ ಮಾಡುತ್ತೇನೆ” ಎಂದು ಹೇಳಿದರು. “ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯೂ ಆಗಿದೆ. ಇಂತಹ ಸುಸಂದರ್ಭದಲ್ಲಿ ಕಲ್ಕಿ ಧಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತಸದ ಸಂಗತಿ” ಎಂದು ತಿಳಿಸಿದರು.

“ಭವ್ಯವಾದ ಕಲ್ಕಿ ದೇವಾಲಯವನ್ನು ನಿರ್ಮಿಸಲಾಗುತ್ತದೆ. ದೇವಾಲಯದಲ್ಲಿ 10 ಗರ್ಭಗುಡಿಗಳು ಇರಲಿವೆ. ವಿಷ್ಣವಿನ ದಶಾವತಾರ ಸಾರುವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ 5 ಶತಮಾನಗಳ ಕನಸು ಈಗ ನನಸಾಗಿದೆ. ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ದಿವ್ಯ ಅನುಭವವು ನಮ್ಮನ್ನೂ ಈಗಲೂ ಭಾವುಕರನ್ನಾಗಿ ಮಾಡುತ್ತದೆ. ಯುಎಇಯಲ್ಲೂ ದೇವಾಲಯ ಉದ್ಘಾಟನೆಯಾಗಿದೆ. ಕಲ್ಕಿ ದೇವಾಲಯವೂ ಇದೇ ಅನುಭೂತಿ ನೀಡಲಿದೆ” ಎಂದರು.

“ನಾವು ವಿಕಾಸವನ್ನೂ ಕೈಗೊಳ್ಳುತ್ತೇವೆ, ವಿರಾಸತ್‌ಅನ್ನೂ (ಪರಂಪರೆ) ಪಾಲಿಸುತ್ತೇವೆ. ಕೇದಾರನಾಥ ಧಾಮದ ಪುನರುಜ್ಜೀವನ, ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಿಸಲಾಗುತ್ತಿದೆ. ಹಾಗೆಯೇ, ದೇಶದ ಏಳಿಗೆಗೆ ನಾವು ಆದ್ಯತೆ ನೀಡುತ್ತೇವೆ. ವಿದೇಶಿ ಹೂಡಿಕೆ ಹರಿದು ಬರುತ್ತಿದೆ, ಉತ್ತಮ ರಸ್ತೆಗಳು ದೇಶದ ಚಹರೆಯನ್ನು ಬದಲಿಸುತ್ತಿವೆ. ದೇಶದಲ್ಲೇ ಮೊದಲು ಬುಲೆಟ್‌ ರೈಲು ಓಡುವ ದಿನಗಳು ತುಂಬ ಹತ್ತಿರದಲ್ಲಿವೆ. ವಂದೇ ಭಾರತ್‌ ರೈಲುಗಳು ಓಡಾಡುತ್ತಿವೆ. ಡಿಜಿಟಲ್‌ ತಂತ್ರಜ್ಞಾನವು ದೇಶವನ್ನು ಮುನ್ನಡೆಸುತ್ತಿದೆ. ವಿಶ್ವದಲ್ಲೇ ಇಂದು ಭಾರತ ಮಿನುಗುತ್ತಿದೆ. ಕಾಲ ಈಗ ಬದಲಾಗಿದೆ. ರಾಮಮಂದಿರ ನಿರ್ಮಾಣವು ಸಾವಿರ ವರ್ಷಗಳ ರಾಮರಾಜ್ಯಕ್ಕೆ ಸಂಕೇತವಾಗಲಿದೆ” ಎಂದು ಹೇಳಿದರು.

ಪ್ರತಿಪಕ್ಷಗಳಿಗೆ ಪರೋಕ್ಷ ಟೀಕೆ

“ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕೆ ಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

ಇದನ್ನೂ ಓದಿ: Kalki Dham Temple: ಕಲ್ಕಿ ಧಾಮ ದೇಗುಲಕ್ಕೆ ಮೋದಿ ಶಂಕುಸ್ಥಾಪನೆ; ಜಗತ್ತಲ್ಲೇ ಇದೇಕೆ ವಿಶಿಷ್ಟ?

ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ ಚೇರ್ಮನ್‌ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ದೇವಾಲಯದ ನೇತೃತ್ವ ವಹಿಸಿಕೊಂಡಿದ್ದಾರೆ. ಇವರು ಕಾಂಗ್ರೆಸ್ ನಾಯಕರು ಕೂಡ ಆಗಿದ್ದರು. ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ದೇವಾಲಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತಲೇ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷವಿರೋಧಿ ಚಟುವಟಿಕೆಯ ಆರೋಪದಲ್ಲಿ ಅವರನ್ನು ಉಚ್ಚಾಟಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version