Site icon Vistara News

Kamal Kant Batra: ಕಾರ್ಗಿಲ್‌ ಯುದ್ಧದ ಹೀರೊ ವಿಕ್ರಮ್‌ ಬಾತ್ರಾ ತಾಯಿ ಇನ್ನಿಲ್ಲ

Kamal Kant Batra And Vikram Batra

Kamal Kant Batra, Mother Of Kargil War Hero Captain Vikram Batra, Dies At 77

ಶಿಮ್ಲಾ: ಕಾರ್ಗಿಲ್‌ ಯುದ್ಧದ (Kargil War) ಹೀರೊ ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ (Captain Vikram Batra) ಅವರ ತಾಯಿ ಕಮಲ್‌ ಕಾಂತ್‌ ಬಾತ್ರಾ (77) (Kamal Kant Batra) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಕಮಲ್‌ ಕಾಂತ್‌ ಬಾತ್ರಾ ಅವರು ನಿಧನರಾಗಿದ್ದು, ಗುರುವಾರ (ಫೆಬ್ರವರಿ 15) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಮಲ್‌ ಕಾಂತ್‌ ಬಾತ್ರಾ ಅವರ ನಿಧನದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಅವರು ಸಂತಾಪ ಸೂಚಿಸಿದ್ದಾರೆ. “ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ ಅವರ ತಾಯಿ ಕಮಲ್‌ ಕಾಂತ್‌ ಬಾತ್ರಾ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ದುಃಖವಾಯಿತು. ಅವರ ಕುಟುಂಬಸ್ಥರು ಹಾಗೂ ಆಪ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಸ್ಪರ್ಧೆ

ಕಮಲ್‌ ಕಾಂತ್‌ ಬಾತ್ರಾ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಮ್‌ ಆದ್ಮಿ ಪಕ್ಷ ಸೇರಿದ್ದ ಕಮಲ್‌ ಕಾಂತ್‌ ಬಾತ್ರಾ ಅವರು ಹಮೀರ್‌ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆ ಬಳಿಕ ಪಕ್ಷದ ಸಂಘಟನಾ ಮಾದರಿಯನ್ನು ಇಷ್ಟಪಡದ ಅವರು ಆಪ್‌ಅನ್ನು ತೊರೆದಿದ್ದರು. ಇದಾದ ಬಳಿಕ ಕಮಲ್‌ ಕಾಂತ್‌ ಬಾತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. “ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ರಾಷ್ಟ್ರೀಯವಾದ ಹಾಗೂ ದೇಶಭಕ್ತಿ ಅವರ ಪರಮ ಧ್ಯೇಯವಾಗಿರಬೇಕು” ಎಂದು ಹೇಳಿದ್ದರು.

ಇದನ್ನೂ ಓದಿ: Kargil Memory : ಕಾರ್ಗಿಲ್‌ ಯೋಧರಿಗೆ ನಮನ ಸಲ್ಲಿಸಲು 3200 ಕಿ.ಮೀ ಸೈಕಲ್‌ ತುಳಿದ ಬೆಂಗಳೂರಿನ ಹುಡುಗ್ರು!

ಯಾರಿವರು ವಿಕ್ರಮ್‌ ಬಾತ್ರಾ?

ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದ ವಿಕ್ರಮ್‌ ಬಾತ್ರಾ ಅವರು 1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದರು. ಆಗ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಶೇರ್‌ ಶಾ ಎಂದೇ ಖ್ಯಾತಿಯಾಗಿದ್ದ ವಿಕ್ರಮ್‌ ಬಾತ್ರಾ ಅವರು ಯುದ್ಧದ ವೇಳೆ “ದಿಲ್‌ ಮಾಂಗೆ ಮೋರ್”‌ (ಈ ಮನಸ್ಸನ್ನೂ ಇನ್ನಷ್ಟು ಬಯಸುತ್ತದೆ) ಎಂದು ಘೋಷಣೆ ಕೂಗಿ ಖ್ಯಾತಿ ಗಳಿಸಿದ್ದರು. ವಿಕ್ರಮ್‌ ಬಾತ್ರಾ ಅವರ ಶೌರ್ಯಕ್ಕೆ ಮರಣೋತ್ತರವಾಗಿ ಭಾರತೀಯ ಸೇನೆಯ ಅತ್ಯುಚ್ಚ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಗಿಲ್‌ನ ಶಿಖರಕ್ಕೆ ಬಾತ್ರಾ ಪೀಕ್‌ ಎಂದು ಹೆಸರಿಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version