Site icon Vistara News

Kamal Nath: ಜೈ ಶ್ರೀರಾಮ್‌ ಘೋಷಣೆ ಕೂಗಿದ ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌; ಬಿಜೆಪಿ ಸೇರುವ ವದಂತಿಗೆ ಮತ್ತೆ ರೆಕ್ಕೆ ಪುಕ್ಕ

Kamal Nath

Kamal Nath

ಭೋಪಾಲ್‌: ಲೋಕಸಭಾ ಚುನಾವಣಾ (Lok Sabha Election) ಹೊಸ್ತಿಲಲ್ಲಿ ಕಾಂಗ್ರೆಸ್‌ (Congress) ಮತ್ತೊಂದು ಪೇಚಿಗೆ ಸಿಲುಕಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ ನಾಥ್‌ (Kamal Nath) ಕಾಂಗ್ರೆಸ್ ರ್‍ಯಾಲಿಯಲ್ಲಿ ಜೈ ಶ್ರೀರಾಮ್ (Jai Shri Ram) ಘೋಷಣೆ ಕೂಗಿದ್ದಾರೆ. ಮಧ್ಯಪ್ರದೇಶದ ಬೆತುಲ್‌ನಲ್ಲಿ ನಡೆದ ರ್‍ಯಾಲಿ ವೇಳೆ ಈ ಬೆಳವಣಿಕೆ ಕಂಡು ಬಂದಿದೆ. ಒಂಭತ್ತು ಬಾರಿಯ ಸಂಸದ ಕಮಲ್‌ ನಾಥ್‌ ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಮಧ್ಯೆ ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಅನುಮಾನ ಮೂಡಿಸಿದೆ.

ರ್‍ಯಾಲಿಯಲ್ಲಿ ಕಮಲ್ ನಾಥ್ ಅವರು ರಾಜ್ಯದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಮತ್ತು ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ. “ನಾನು ಚಿಂದ್ವಾರದಲ್ಲಿ ಅತಿದೊಡ್ಡ ಹನುಮಾನ್ ದೇವಾಲಯವನ್ನು ನಿರ್ಮಿಸಿದ್ದೇನೆ. ಆದರೆ ಅದನ್ನು ಎಂದಿಗೂ ಪ್ರಚಾರ ಮಾಡಿಲ್ಲ” ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಇಷ್ಟೇ ಅಲ್ಲ ನೆರೆದಿದ್ದ ಜನರು ಕೂಡ ಒಕ್ಕೊರಲಿನಿಂದ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮನವಿ ಮಾಡಿದ್ದಾರೆ. ಕಮಲ್ ನಾಥ್ ಬಿಜೆಪಿಯನ್ನು ದೂರಿ ಜೈ ಶ್ರೀರಾಮ್ ಘೋಷಣೆ ಕೂಗಿರುವುದು ಗೊಂದಲಕ್ಕೆ ಕಾರಣಾಗಿದೆ.

ಬಿಜೆಪಿ ವಿರುದ್ಧ ಟೀಕೆ

ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಕಮಲ್‌ ನಾಥ್‌, ʼʼಭ್ರಷ್ಟಾಚಾರದಿಂದಾಗಿ ಯಾವುದೇ ಕೈಗಾರಿಕೋದ್ಯಮಿಗಳು ಮಧ್ಯಪ್ರದೇಶದಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲʼʼ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಭರವಸೆಗಳನ್ನು ಟೀಕಿಸಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಹಣದುಬ್ಬರ ಹೆಚ್ಚಲಿದೆ ಎಂದು ಹೇಳಿದ್ದಾರೆ. “ರಾಮ ಮಂದಿರವನ್ನು ಸಾರ್ವಜನಿಕ ದೇಣಿಗೆಗಳ ಸಹಾಯದಿಂದ ನಿರ್ಮಿಸಲಾಗಿದೆ, ಕೇವಲ ಬಿಜೆಪಿಯಿಂದ ಅಲ್ಲ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಫೆಬ್ರವರಿಯಲ್ಲಿ ಕಮಲ್ ನಾಥ್ ಅವರು ತಮ್ಮ ಪುತ್ರ ನಕುಲ್ ನಾಥ್ ಅವರೊಂದಿಗೆ ಹಠಾತ್ ದೆಹಲಿಗೆ ಭೇಟಿ ನೀಡಿದ್ದರು. ಜತೆಗೆ ಅದೇ ಸಮಯದಲ್ಲಿ ಅವರು ತಮ್ಮ ನಿವಾಸದ ಮೇಲೆ ‘ಜೈ ಶ್ರೀ ರಾಮ್’ ಧ್ವಜ ಹಾರಿಸಿದ್ದರು. ಇದರಿಂದ ಕಮಲ್ ನಾಥ್ ಬಿಜೆಪಿಗೆ ಸೇರುವ ಊಹಾಪೋಹಗಳಿಗೆ ಹರಡಿತ್ತು. ಆದಾಗ್ಯೂ ಅವರು ಬಳಿಕ ಸ್ಪಷ್ಟನೆ ನೀಡಿ ಬಿಜೆಪಿಗೆ ಸೇರುತ್ತಿಲ್ಲ ಎಂದಿದ್ದರು.

ಇದನ್ನೂ ಓದಿ: Kamal Nath: ‘ಇಂದಿರಾ ಗಾಂಧಿ 3ನೇ ಪುತ್ರ’ ಕಮಲ್‌ ನಾಥ್‌ಗೇಕೆ ಕಾಂಗ್ರೆಸ್‌ ಮೇಲೆ ಮುನಿಸು?

ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕರು

ಈ ಮಧ್ಯೆ ಕಾಂಗ್ರೆಸ್‌ ಶಾಕ್‌ ನೀಡಿ 100ಕ್ಕೂ ಅಧಿಕ ಮಂದಿ ಕೈ ನಾಯಕರು ಬಿಜೆಪಿ ಸೇರಿದ್ದಾರೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕಾಂಗ್ರೆಸ್ ಮಾಜಿ ಶಾಸಕ ಹರಿವಲ್ಲಭ್ ಶುಕ್ಲಾ ಮತ್ತು ಪಕ್ಷದ 100ಕ್ಕೂ ಅಧಿಕ ಸ್ಥಳೀಯ ಮುಖಂಡರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಸ್ವಾಗತಿಸಿದರು. ಕೆಲವು ತಿಂಗಳುಗಳಲ್ಲಿ ರಾಜ್ಯದ ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರಿದ್ದಾರೆ.

Exit mobile version