Site icon Vistara News

ಉದ್ಧವ್‌ ಠಾಕ್ರೆ ಬಗ್ಗೆ ಕಂಗನಾ ರಣಾವತ್‌ ಆಡಿದ್ದ ಮಾತು ಸತ್ಯವಾಯ್ತಾ?!; ಕರ್ಮಫಲವೆಂದ ನೆಟ್ಟಿಗರು

Kangana Ranaut

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಉದ್ಧವ್‌ ಠಾಕ್ರೆ ಯಾವ ಹೊತ್ತಲ್ಲಿ ಬೇಕಾದರೂ ಹುದ್ದೆಯನ್ನು ಕಳೆದುಕೊಳ್ಳಬಹುದು ಎಂಬಂಥ ಸ್ಥಿತಿ ಎದುರಾಗಿದೆ. ಸಚಿವ, ಶಿವಸೇನೆ ನಾಯಕ ಏಕನಾಥ್‌ ಶಿಂಧೆ 40ಕ್ಕೂ ಶಾಸಕರ ಬೆಂಬಲದೊಂದಿಗೆ ಅಸ್ಸಾಂನ ಗುವಾಹಟಿಯಲ್ಲಿ ರೆಸಾರ್ಟ್‌ ಸೇರಿದ್ದಾರೆ. ಇತ್ತ ಉದ್ಧವ್‌ ಠಾಕ್ರೆ ಈಗಾಗಲೇ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದಿದ್ದಾರೆ. ಇಷ್ಟೆಲ್ಲದರ ಮಧ್ಯೆ ಎರಡು ವರ್ಷಗಳ ಹಿಂದೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಅವರು ಉದ್ಧವ್‌ ಠಾಕ್ರೆಯವರಿಗೆ ಹಾಕಿದ್ದ ಶಾಪವೊಂದು ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ.

ʼ2020ರಲ್ಲಿ ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೋರೇಶನ್‌ ನಟಿ ಕಂಗನಾ ರಣಾವತ್‌ ಅವರ ಪಾಲಿಹಿಲ್‌ನಲ್ಲಿರುವ ಕಚೇರಿಯನ್ನು ಬುಲ್ಡೋಜರ್‌ ಮೂಲಕ ತೆರವುಗೊಳಿಸಿತ್ತು. ಆಗ ಕಂಗಾನ ರಣಾವತ್‌ ಉದ್ಧವ್‌ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಿಮ್ಮ ಅಹಂಕಾರಕ್ಕೆ ಸರಿಯಾದ ಏಟು ಬೀಳುವ ದಿನ ತುಂಬ ದೂರವೇನೂ ಇಲ್ಲ. ಇವತ್ತು ನನ್ನ ಕಚೇರಿ ಧ್ವಂಸವಾದಂತೆ, ಮುಂದೊಂದು ದಿನ ನಿಮ್ಮ ಅಹಂಕಾರ ಛಿದ್ರವಾಗುತ್ತದೆʼ ಎಂದಿದ್ದರು. ಈಗ ನೆಟ್ಟಿಗರು ಅದೇ ವಿಷಯವನ್ನಿಟ್ಟುಕೊಂಡು ಉದ್ಧವ್‌ ಠಾಕ್ರೆ ವಿರುದ್ಧ ಪೋಸ್ಟ್‌ ಹಾಕುತ್ತಿದ್ದಾರೆ. ʼಕರ್ಮ ಯಾರನ್ನೂ ಬಿಡುವುದಿಲ್ಲʼ ಎಂದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !

ಕಂಗನಾ ರಣಾವತ್‌ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಸುಶಾಂತ್‌ ಸಿಂಗ್‌ ರಜಪೂತ್‌ ಸತ್ತಾಗಿನಿಂದಲೂ ನಡೆಯುತ್ತಿದೆ. ಸುಶಾಂತ್‌ ಸಿಂಗ್‌ ಸಾವನ್ನಪ್ಪಿದ ನಂತರ ಕಂಗನಾ, ಬಾಲಿವುಡ್‌ ಮತ್ತು ಮುಂಬೈ ಪೊಲೀಸರ ಬಗ್ಗೆ ನಿರಂತರವಾಗಿ ವಾಗ್ದಾಳಿ ನಡೆಸಿದ್ದರು. ಸ್ವಜನಪಕ್ಷಪಾತದಿಂದಲೇ ಸುಶಾಂತ್‌ ಮೃತಪಟ್ಟಿದ್ದಾರೆ, ಮುಂಬೈ ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬಿತ್ಯಾದಿ ಆರೋಪಗಳನ್ನು ಮಾಡಿದ್ದರು. ಆಗ ಶಿವಸೇನೆ ಸಂಸದ ಸಂಜಯ್‌ ರಾವತ್‌ ಪ್ರತಿಕ್ರಿಯೆ ನೀಡಿ, ʼನೀವು ಮುಂಬೈಗೆ ಬರಲೇಬೇಡಿʼ ಎಂದು ಹೇಳಿದ್ದರು. ಮತ್ತೆ ಅದಕ್ಕೆ ಪ್ರತಿಯಾಗಿ ಟ್ವೀಟ್‌ ಮಾಡಿದ್ದ ಕಂಗನಾ ರಣಾವತ್‌, ʼಮುಂಬೈಗೆ ಕಾಲಿಡಬೇಡಿ ಎಂದು ನನಗೆ ಬೆದರಿಕೆ ಹಾಕುತ್ತಾರೆ. ಈ ಮುಂಬೈ ಕೂಡ ಪಾಕ್‌ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆʼ ಎಂದಿದ್ದರು. ಹೀಗೆ ಜಟಾಪಟಿ ಶುರುವಾಗಿ ಒಂದೆರಡು ತಿಂಗಳಲ್ಲಿ ಕಂಗನಾ ಕಚೇರಿ ನೆಲಸಮವಾಗಿತ್ತು.

ಉದ್ಧವ್‌ ಠಾಕ್ರೆ ಅಹಂಕಾರ ಛಿದ್ರವಾಗುತ್ತದೆ ಎಂದು ಅಂದು ಕಂಗನಾ ಹೇಳಿದ ಮಾತುಗಳು ಎಷ್ಟು ಸತ್ಯ ನೋಡಿ ಎಂದು ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼಫಾಲ್ಗರ್‌ನಲ್ಲಿ ಹಿಂದು ಸಂತರ ಮೇಲೆ ಗುಂಪು ಹಲ್ಲೆ ಮಾಡಿ ಕೊಂದಿದ್ದು, ಅರ್ನಬ್‌ ಗೋಸ್ವಾಮಿಯ ಕಾನೂನು ಬಾಹಿರ ಬಂಧನ, ಕಂಗನಾ ರಣಾವತ್‌ ಮೇಲೆ ದೌರ್ಜನ್ಯ, ಹೀಗೆ ಈ ಸರ್ಕಾರದ ಅಕ್ರಮಗಳು ಒಂದಲ್ಲ, ಎರಡಲ್ಲ. ಈಗ ಅವರ ಕರ್ಮವೇ ಅವರನ್ನು ಬಾಧಿಸುತ್ತಿದೆʼ ಎಂದು ಸೋಷಿಯಲ್‌ ಮೀಡಿಯಾ ಬಳಕೆದಾರರು ಒಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್‌ ಹೊಸ ಲಕ್ಷುರಿಯಸ್‌ ಮನೆ ಹೇಗಿದೆ ಗೊತ್ತಾ? ಪೋಟೊಗಳು ವೈರಲ್

Exit mobile version