Site icon Vistara News

Kanwar Yatra: ದೇವರ ಮೆರವಣಿಗೆ ವೇಳೆ ಕಾದು ಕುಳಿತಿದ್ದ ಯಮ; ವಿದ್ಯುತ್‌ ತಗುಲಿ ಐವರ ಸಾವು

Kanwar Yatra In Uttar Pradesh

5 Kanwariyas electrocuted to death, several injured in Uttar Pradesh

ಲಖನೌ: ದೇವರು ನಮಗೆ ಆಶೀರ್ವಾದ ಮಾಡಲಿ, ನಮಗೆ, ನಮ್ಮನ್ನು ನಂಬಿದವರಿಗೆ, ಹಿತೈಷಿಗಳ ಬಾಳಿನಲ್ಲಿ ಸಮೃದ್ಧಿ ನೆಲೆಸಲಿ, ಮನಸ್ಸಿಗೆ ಶಾಂತಿ ಸಿಗಲಿ, ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ತೀರ್ಥಯಾತ್ರೆಗೆ ಹೋಗಿ ಬರುತ್ತೇವೆ. ದೇವರ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಕನ್ವರ್‌ ಯಾತ್ರೆಯ (Kanwar Yatra) ಮೆರವಣಿಗೆ ವೇಳೆಯೇ ವಿದ್ಯುತ್‌ ಪ್ರವಹಿಸಿ ಐವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಮೀರತ್‌ ಜಿಲ್ಲೆ ರಾಲಿ ಚೌಹಾಣ್‌ ಗ್ರಾಮದಲ್ಲಿ ದುರಂತ ಸಂಭವಿಸಿದೆ. ಕನ್ವರ್‌ ಯಾತ್ರೆ ಹಿನ್ನೆಲೆಯಲ್ಲಿ ಹರಿದ್ವಾರದ ಪವಿತ್ರ ಗಂಗಾ ನದಿಯ ನೀರು ತಂದು, ಗ್ರಾಮದಲ್ಲಿ ವಾಹನದಲ್ಲಿ ದೇವರ ಮೆರವಣಿಗೆ ಮಾಡಲಾಗುತ್ತಿತ್ತು. ಇದೇ ವೇಳೆ ಹೈ ವೋಲ್ಟೇಜ್‌ ಇರುವ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಭಾರಿ ಪ್ರಮಾಣದಲ್ಲಿ ಶಾಕ್‌ ಸರ್ಕ್ಯೂಟ್‌ ಆಗಿದೆ. ಇದರಿಂದ ಹಲವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಇವರಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

“ಹೈ ವೋಲ್ಟೇಜ್‌ ವಿದ್ಯುತ್‌ ತಂತಿಗೆ ವಾಹನ ಸ್ಪರ್ಶವಾದ ಕಾರಣ ಶಾರ್ಟ್‌ ಸಕ್ಯೂಟ್‌ನಿಂದ ಸುಮಾರು 10 ಜನ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಐವರು ಮೃತಪಟ್ಟಿದ್ದಾರೆ. ಉಳಿದವರ ಪರಿಸ್ಥಿತಿ ಈಗಲೇ ಏನೂ ಹೇಳಲು ಆಗುವುದಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಮೀರತ್‌ ಜಿಲ್ಲಾಧಿಕಾರಿ ದೀಪಕ್‌ ಮೀನಾ ಮಾಹಿತಿ ನೀಡಿದರು.

ಉತ್ತರ ಪ್ರದೇಶದಲ್ಲಿ ಹಿಂದುಗಳು ಕನ್ವರ್‌ ಯಾತ್ರೆಯನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಗಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರನ್ನು ಮೆರವಣಿಗೆ ಮಾಡಿ ಲಕ್ಷಾಂತರ ಜನ ಹಬ್ಬವನ್ನು ಆಚರಿಸುತ್ತಾರೆ. ಗಂಗಾ ನದಿಯ ನೀರು ತರಲು ನೂರಾರು ಕಿಲೋ ಮೀಟರ್‌ ಪಾದಯಾತ್ರೆ ಕೈಗೊಳ್ಳುತ್ತಾರೆ. ಹೀಗೆ, ಹರಿದ್ವಾರದಿಂದ ಗಂಗಾ ಜಲ ತಂದು, ಮೆರವಣಿಗೆ ಮಾಡುವ ಸಂಭ್ರಮದಲ್ಲಿರುವಾಗಲೇ ಮೀರತ್‌ನಲ್ಲಿ ದುರಂತ ಸಂಭವಿಸಿರುವುದು ಜನರಲ್ಲಿ ವಿಷಾದದ ಕಾರ್ಮೋಡ ಮೂಡುವಂತೆ ಮಾಡಿದೆ.

Exit mobile version