Site icon Vistara News

Kanwar Yatra: ಕನ್ವರ್ ಯಾತ್ರೆ ಮಾರ್ಗದಲ್ಲಿನ ಮಸೀದಿ ಕಾಣದಂತೆ ಪರದೆ; ವ್ಯಾಪಕ ವಿರೋಧದ ಬಳಿಕ ತೆರವು

Kanwar Yatra

ಡೆಹ್ರಾಡೂನ್‌: ಸಂಭಾವ್ಯ ಗಲಭೆಗಳನ್ನು ತಪ್ಪಿಸಲು ಉತ್ತರಾಖಂಡ (Uttarakhand)ದ ಹರಿದ್ವಾರ (Haridwar)ದ ಕನ್ವರ್ ಯಾತ್ರೆ (Kanwar Yatra) ಮಾರ್ಗದಲ್ಲಿನ ಎರಡು ಮಸೀದಿಗಳು ಮತ್ತು ಮಝಾರ್​​ (ಸಮಾಧಿ)ಗಳ ಮುಂಭಾಗಗಳನ್ನು ಶುಕ್ರವಾರ ಬಿಳಿ ಬಟ್ಟೆಯ ದೊಡ್ಡ ಹಾಳೆಗಳಿಂದ ಮುಚ್ಚಲಾಗಿತ್ತು. ಆದಾಗ್ಯೂ ಆಕ್ಷೇಪಣೆಗಳ ನಂತರ ಸಂಜೆಯ ವೇಳೆಗೆ ಹಾಳೆಗಳನ್ನು ತೆಗೆದು ಹಾಕಲಾಯಿತು.

ಜ್ವಾಲಾಪುರ ಪ್ರದೇಶದಲ್ಲಿರುವ ಮಸೀದಿಗಳು ಮತ್ತು ಮಝಾರ್‌ಗ​ಳ ಮುಂದೆ ಬಿದಿರಿನ ಅಟ್ಟಣಿಗೆಗಳ ಮೇಲೆ ಹಾಳೆಗಳನ್ನು ನೇತು ಹಾಕಲಾಗಿತ್ತು. ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದ ಮಸೀದಿಯ ಮೌಲಾನಾ ಮತ್ತು ಮಝಾರ್​​ನ ಉಸ್ತುವಾರಿಗಳು ಈ ಬಗ್ಗೆ ಯಾವುದೇ ಆಡಳಿತಾತ್ಮಕ ಆದೇಶದ ಬಗ್ಗೆ ನಮಗೆ ತಿಳಿದಿಲ್ಲ. ಕನ್ವರ್ ಯಾತ್ರೆಯ ಸಮಯದಲ್ಲಿ ಇಂತಹ ಕ್ರಮವನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲು ಎಂದು ಹೇಳಿದ್ದರು.

ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯೆಗೆ ಲಭಿಸಿಲ್ಲ. ಇತ್ತ ಕ್ಯಾಬಿನೆಟ್ ಸಚಿವ ಸತ್ಪಾಲ್ ಮಹಾರಾಜ್ ಈ ಬಗ್ಗೆ ಮಾತನಾಡಿ, ಶಾಂತಿ, ಸುವ್ಯವಸ್ಥೆ ಕಾಪಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. “ಸಂಭಾವ್ಯ ತೊಂದರೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಅಂತಹ ದೊಡ್ಡ ವಿಷಯವಲ್ಲ. ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದಾಗ ನಾವು ಅದನ್ನು ಮುಚ್ಚುತ್ತೇವೆʼʼ ಎಂದು ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವ್ಯಾಪಕ ವಿರೋಧ

ಸ್ಥಳೀಯರು ಮತ್ತು ರಾಜಕಾರಣಿಗಳು ಸೇರಿದಂತೆ ಹಲವರು ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಬಳಿಕ ಬಟ್ಟೆಯ ಹಾಳೆಗಳನ್ನು ತೆಗೆದು ಹಾಕಿತು. “ಪರದೆಗಳನ್ನು ತೆಗೆದುಹಾಕಲು ರೈಲ್ವೆ ಪೊಲೀಸ್ ಠಾಣೆಯಿಂದ ನಮಗೆ ಆದೇಶ ಬಂದಿದೆ. ಅದಕ್ಕಾಗಿಯೇ ನಾವು ಇವುಗಳನ್ನು ತೆಗೆದುಹಾಕಿದ್ದೇವೆ” ಎಂದು ವಿಶೇಷ ಪೊಲೀಸ್ ಅಧಿಕಾರಿ (SPO) ಡ್ಯಾನಿಶ್ ಅಲಿ ತಿಳಿಸಿದರು.

ನಾಯಕರು ಹೇಳಿದ್ದೇನು?

ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ನಯೀಮ್ ಖುರೇಷಿ ಅವರು ತಮ್ಮ ಜೀವನದಲ್ಲಿ ಇಂತಹ ಕ್ರಮ ನೋಡಿದ್ದು ಇದು ಮೊದಲ ಬಾರಿ ಎಂದು ವ್ಯಂಗ್ಯವಾಡಿದ್ದಾರೆ. “ನಾವು ಮುಸ್ಲಿಮರು ಯಾವಾಗಲೂ ಕನ್ವರ್ ಜಾತ್ರೆಗೆ ಶಿವಭಕ್ತರನ್ನು ಸ್ವಾಗತಿಸುತ್ತೇವೆ ಮತ್ತು ಅವರಿಗೆ ವಿವಿಧ ಸ್ಥಳಗಳಲ್ಲಿ ಉಪಹಾರವನ್ನು ವ್ಯವಸ್ಥೆ ಮಾಡುತ್ತೇವೆ. ಇದು ಹರಿದ್ವಾರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಾಮರಸ್ಯಕ್ಕೆ ಉದಾಹರಣೆ. ಮಸೀದಿಯನ್ನು ಮುಚ್ಚುವ ಸಂಪ್ರದಾಯ ಎಂದಿಗೂ ಇರಲಿಲ್ಲ” ಎಂದು ಹೇಳಿದ್ದಾರೆ.

ʼʼಕನ್ವರ್ ಮೇಳ ಪ್ರಾರಂಭವಾಗುವ ಮೊದಲು ಆಡಳಿತವು ಸಭೆ ನಡೆಸಿದ್ದು, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರನ್ನು ಎಸ್‌ಪಿಒಗಳನ್ನಾಗಿ ಮಾಡಲಾಗಿತ್ತು. ಆ ವೇಳೆ ಧಾರ್ಮಿಕ ಕಟ್ಟಡಗಳನ್ನು ಮುಚ್ಚುವ ಬಗ್ಗೆ ಯಾರೂ ಮಾತನಾಡಿಲ್ಲʼʼ ಎಂದು ಮಝಾರ್‌ನ ಉಸ್ತುವಾರಿ ಶಕೀಲ್ ಅಹ್ಮದ್ ಹೇಳಿದ್ದಾರೆ. ʼʼಕನ್ವರ್‌ ಯಾತ್ರಾರ್ಥಿಗಳು ವಿಶ್ರಾಂತಿ ಪಡೆಯಲು ಮಸೀದಿಗಳು ಮತ್ತು ಮಝಾರ್‌ನ ಹೊರಗಿನ ಮರಗಳ ನೆರಳಿನಲ್ಲಿ ನಿಲ್ಲುತ್ತಾರೆ. ಇದರಿಂದ ಯಾವುದೇ ಸಮಸ್ಯೆಯಾಗಿಲ್ಲʼʼ ಎಂದಿದ್ದಾರೆ.

ಇದನ್ನೂ ಓದಿ: Kanwar Yatra: ಕನ್ವರ್‌ ಯಾತ್ರೆ ವೇಳೆ ನಾಮ ಫಲಕ ಕಡ್ಡಾಯ; ಸುಪ್ರೀಂಕೋರ್ಟ್‌ನಿಂದ ಮತ್ತೊಂದು ಮಹತ್ವದ ಆದೇಶ

ಕಾಂಗ್ರೆಸ್ ಮುಖಂಡ ರಾವ್ ಅಫಾಕ್ ಅಲಿ ಮಾತನಾಡಿ, ʼʼಮಸೀದಿಗಳು ಮತ್ತು ಮಝಾರ್‌ ಮುಚ್ಚುವ ಆಡಳಿತದ ನಿರ್ಧಾರ ಆಶ್ಚರ್ಯಕರವಾಗಿತ್ತುʼʼ ಎಂದು ಹೇಳಿದ್ದಾರೆ.

Exit mobile version