Site icon Vistara News

Kanwar Yatra: ಕನ್ವರ್ ಯಾತ್ರೆ ಮಾರ್ಗದಲ್ಲಿನ ಅಂಗಡಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಸೂಚಿಸಿಲ್ಲ; ಮಧ್ಯಪ್ರದೇಶ ಸರ್ಕಾರ ಸ್ಪಷ್ಟನೆ

Kanwar Yatra

Kanwar Yatra

ಭೋಪಾಲ್‌: ರಾಜ್ಯದಲ್ಲಿ ಕನ್ವರ್ ಯಾತ್ರೆ (Kanwar Yatra) ಸಾಗುವ ಮಾರ್ಗದಲ್ಲಿನ ಅಂಗಡಿ ಮಾಲೀಕರು ತಮ್ಮ ಹೆಸರುಗಳನ್ನು ಪ್ರದರ್ಶಿಸುವಂತೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಮಧ್ಯಪ್ರದೇಶ (Madhya Pradesh)ದ ಬಿಜೆಪಿ ಸರ್ಕಾರ ಸ್ಪಷ್ಟಪಡಿಸಿದೆ.

ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕೆಂಬ ಉತ್ತರ ಪ್ರದೇಶದ ಆದೇಶ ವಿವಾದದ ಹುಟ್ಟು ಹಾಕಿದ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ಈ ಸ್ಪಷ್ನೆ ನೀಡಿದ್ದು, ಯಾವುದೇ ಗೊಂದಲವನ್ನು ಹರಡದಂತೆ ನಗರ ಸಂಸ್ಥೆಗಳಿಗೆ ಸೂಚಿಸಿದೆ. ಅಂಗಡಿ ಮಾಲೀಕರಿಗೆ ತಮ್ಮ ಹೆಸರು ಮತ್ತು ಫೋನ್ ಸಂಖ್ಯೆಗಳನ್ನು ಬೋರ್ಡ್‌ಗಳಲ್ಲಿ ಪ್ರದರ್ಶಿಸಲು ನಿರ್ದೇಶಿಸಲಾಗಿದೆ ಎಂದು ಉಜ್ಜಯಿನಿ ಮೇಯರ್ ಹೇಳಿದ ಕೆಲವು ದಿನಗಳ ನಂತರ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ (UDHD) ಭಾನುವಾರ ರಾತ್ರಿ ಈ ಹೇಳಿಕೆ ಬಿಡುಗಡೆ ಮಾಡಿದೆ.

ನಗರ ಪ್ರದೇಶಗಳಲ್ಲಿನ ಕನ್ವರ್ ಯಾತ್ರಾ ಮಾರ್ಗಗಳಲ್ಲಿನ ಅಂಗಡಿ ಮಾಲೀಕರು ತಮ್ಮ ಹೆಸರಿನ ಬೋರ್ಡ್‌ ಅಳವಡಿಸುವಂತೆ ರಾಜ್ಯ ಸರ್ಕಾರ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಯುಡಿಎಚ್‌ಡಿ ಸ್ಟಷ್ಟಪಡಿಸಿದೆ. ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಅವರು ಕಳೆದ ವಾರ, ಎರಡು ವರ್ಷಗಳ ಹಿಂದಿನ ಮೇಯರ್-ಇನ್-ಕೌನ್ಸಿಲ್‌ನ ನಿರ್ಧಾರವನ್ನು ಉಲ್ಲೇಖಿಸಿ, ಅಂಗಡಿಯ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕಯನ್ನು ಖಂಡಿಸಿದ ಯುಡಿಎಚ್‌ಡಿ, ಕನ್ವರ್ ಯಾತ್ರೆಗೆ ಸಂಬಂಧಿಸಿದ ಹರಡಿಸುವ ಈ ಗೊಂದಲಗಳನ್ನು ಬಗೆಹರಿಸುವಂತೆ ನಗರ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್ ಕೂಡ ನಗರದ ಅಂಗಡಿ ಫಲಕಗಳಲ್ಲಿ ಹೆಸರು ಮತ್ತು ಫೋನ್ ಸಂಖ್ಯೆಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ನಿಂದ ತಡೆ

ಈ ಮಧ್ಯೆ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಇರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆ ನಡೆಯವವರೆಗೆ ತಡೆಯಾಜ್ಞೆ ಹೊರಡಿಸುವುದಾಗಿ ಹೇಳಿದೆ. ಪೊಲೀಸರು ನಾಮಫಲಕ ಅಳವಡಿಸಿ ಎಂದು ವ್ಯಾಪಾರಿಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್‌, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಇಂದು ಆರಂಭ

ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಇಂದು ಪ್ರಾರಂಭವಾಗಿರುವ ಈ ಯಾತ್ರೆ ಆಗಸ್ಟ್ 2ರವರೆಗೆ ನಡೆಯಲಿದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ. 

ಇದನ್ನೂ ಓದಿ: Kanwar Yatra: ಕನ್ವರ್‌ ಯಾತ್ರೆ ವೇಳೆ ಅಂಗಡಿಗಳಿಗೆ ನಾಮ ಫಲಕ ಕಡ್ಡಾಯ ಆದೇಶಕ್ಕೆ ಸುಪ್ರೀಂ ತಡೆ

Exit mobile version