Site icon Vistara News

Kanwar Yatra: ಕನ್ವರ್‌ ಯಾತ್ರೆ ವೇಳೆ ನಾಮ ಫಲಕ ಕಡ್ಡಾಯ; ಸುಪ್ರೀಂಕೋರ್ಟ್‌ನಿಂದ ಮತ್ತೊಂದು ಮಹತ್ವದ ಆದೇಶ

Kanwar Yatra

ನವದೆಹಲಿ: ಕನ್ವರ್ ಯಾತ್ರೆ (Kanwar Yatra) ಸಾಗುವ ಮಾರ್ಗದಲ್ಲಿನ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಹೊರಡಿಸಿದ ಆದೇಶಕ್ಕೆ ವಿಧಿಸಿರುವ ಮಧ್ಯಂತರ ತಡೆಯಾಜ್ಞೆ(Stay Order)ಯನ್ನು ಸುಪ್ರೀಂ ಕೋರ್ಟ್‌(Supreme Court) ಮತ್ತೆ ವಿಸ್ತರಿಸಿದೆ.

ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಇರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ ಜು.22ರಂದು ಮಧ್ಯಂತರ ತಡೆ ನೀಡಿ, ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ಈ ಹಿಂದೆ ಹೇಳಿದಂತೆ ವ್ಯಾಪಾರಿಗಳನ್ನು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ. ಅಲ್ಲದೇ ಮಧ್ಯಂತರ ತಡೆಯನ್ನು ಮತ್ತೆ ವಿಸ್ತರಿಸಿದೆ.

ಇನ್ನು ಇದೇ ವೇಳೆ ಪವಿತ್ರ ಯಾತ್ರೆಯಾಗಿರುವ ಕನ್ವರ್‌ ಯಾತ್ರೆ ಸುಗಮವಾಗಿ, ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ಸಾಗಲಿ ಎಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿತು. ಆದರೆ ಕೋರ್ಟ್‌, ವ್ಯಾಪಾರಿಗಳ ಮೇಲೆ ಒತ್ತಡ ಹೇರಲು, ಒತ್ತಾಯಿಸಲು ಸಾಧ್ಯವಿಲ್ಲ. ಅವರು ಬಯಸಿದ್ದಲ್ಲಿ ಯಾವ ತರಹದ ಆಹಾರ ಅವರ ಅಂಗಡಿಗಳಲ್ಲಿ ಸಿಗುತ್ತದೆ ಎಂಬುದನ್ನು ಬೋರ್ಡ್‌ನಲ್ಲಿ ಪ್ರಕಟಿಸಬಹುದು ಎಂದಿದೆ.

ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಜು.22 ಪ್ರಾರಂಭವಾಗುವ ಈ ಯಾತ್ರೆ ಆಗಸ್ಟ್ 2ರವರೆಗೆ ನಡೆಯಲಿದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ. ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೋಟೆಲ್, ಢಾಬಾಗಳು ಮತ್ತು ಇತರ ವ್ಯಾಪಾರಿಗಳು ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: Kanwar Yatra: ಕನ್ವರ್‌ ಯಾತ್ರೆ ವೇಳೆ ಅಂಗಡಿಗಳಿಗೆ ನಾಮ ಫಲಕ ಕಡ್ಡಾಯ ಆದೇಶಕ್ಕೆ ಸುಪ್ರೀಂ ತಡೆ

Exit mobile version