Site icon Vistara News

Kanyadan: ಮದುವೆಗೆ ಬಂದ ವಧುಗಳು ಗರ್ಭಿಣಿಯರು! ಹೆಸರು ಕೈಬಿಟ್ಟು ಟೀಕೆಗೆ ಒಳಗಾದ ಮಧ್ಯಪ್ರದೇಶ ಸರ್ಕಾರ

Kanyadan

ಭೋಪಾಲ್: ಮಧ್ಯಪ್ರದೇಶದಲ್ಲಿ ಸರ್ಕಾರಿ ಯೋಜನೆಯೊಂದರ ಬಗ್ಗೆ ವಿವಾದ ಎದ್ದಿದೆ. ವಿವಾಹ ಯೋಜನೆಯ ಫಲಾನುಭವಿಗಳಾಗುವ ಮುನ್ನ ಮಹಿಳೆಯರನ್ನು ಅನುಚಿತವಾಗಿ ಪ್ರೆಗ್ನೆನ್ಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆಳುವ ಬಿಜೆಪಿಯ ಮೇಲೆ ಪ್ರತಿಪಕ್ಷ ಕಾಂಗ್ರೆಸ್‌ ಕಿಡಿಕಾರಿದೆ.

ರಾಜ್ಯದ ದಿಂಡೋರಿ ಜಿಲ್ಲೆಯ ಗಡಸರಾಯ್‌ ಪಟ್ಟಣದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ 219 ಜೋಡಿಯ ಮದುವೆಯನ್ನು ಜಿಲ್ಲಾಡಳಿತ ನೆರವೇರಿಸಿತ್ತು. ಇದರಲ್ಲಿ ಹೆಸರು ನೋಂದಾಯಿಸಿದ ಕೆಲವು ಸ್ತ್ರೀಯರು ಮದುವೆ ಕಾರ್ಯಕ್ರಮಕ್ಕೆ ಬಂದಾಗ ಅವರ ಹೆಸರು ಪಟ್ಟಿಯಲ್ಲಿ ಇರಲೇ ಇಲ್ಲ. ಇದಕ್ಕೂ ಮುನ್ನ ಇವರ ಪ್ರೆಗ್ನೆನ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್‌ ಬಂದಿತ್ತು.

ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಲ್ಲಿ ಸರ್ಕಾರ ಪ್ರತಿ ಜೋಡಿಗೆ 55,000 ರೂ ನೀಡುತ್ತದೆ. ಇದರಲ್ಲಿ 49,000 ರೂ ಆಯಾ ಮಹಿಳೆಗೆ ಸೇರುತ್ತದೆ. ಉಳಿದ ಹಣ ಮದುವೆ ಏರ್ಪಾಡಿಗೆ ಸೇರುತ್ತದೆ.

ಇದಕ್ಕಾಗಿ ನೋಂದಾಯಿಸಿದ ಮಹಿಳೆಯರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಇದೇ ಸಂದರ್ಭದಲ್ಲಿ ಇವರ ಗರ್ಭಧಾರಣ ಪರೀಕ್ಷೆಯನ್ನೂ ನಡೆಸಲಾಗಿದೆ ಎಂಬುದು ಆರೋಪ. ಹೀಗೆ ಪರೀಕ್ಷೆ ನಡೆಸಲಾಗಿರುವವರಲ್ಲಿ ಹಲವು ಮಂದಿ ಗರ್ಭಿಣಿಯರಾಗಿರುವುದು ಕಂಡುಬಂದಿತ್ತು. ಇಂಥವರ ಹೆಸರನ್ನು ಜಿಲ್ಲಾಡಳಿತ ಮದುವೆ ಪಟ್ಟಿಯಿಂದ ಕೈಬಿಟ್ಟಿತ್ತು. ʼʼಇದು ಸ್ತ್ರೀಯರಿಗೆ ಮಾಡುತ್ತಿರುವ ಅವಮಾನ. ಇಂಥ ಅಮಾನುಷ, ಅವಮಾನಕಾರಿ ಪರೀಕ್ಷೆಗಳನ್ನು ಮಾಡಬೇಕು ಎಂಬ ನಿಯಮವಿದ್ದರೆ ಅದನ್ನು ಬಹಿರಂಗಪಡಿಸಬೇಕುʼʼ ಎಂದು ಕಾಂಗ್ರೆಸ್‌ ಮುಖಂಡರು ಟೀಕಿಸಿದ್ದಾರೆ.

ʼʼಈಗಾಗಲೇ ಮದುವೆಯಾಗಿರುವ ಕೆಲವರು ಅನುದಾನದ ಆಸೆಯಿಂದ ಇಂಥ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಂಡುಬಂದಿದೆ. ಹೀಗಾಗಿ ಅಂಥವರನ್ನು ಕೈಬಿಡಬೇಕಾಗಿ ಬರುತ್ತದೆʼʼ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ʼʼನಮಗೆ ನೀಡಲಾಗಿರುವ ಸೂಚನೆಗಳನ್ನು ಪಾಲಿಸಿದ್ದೇವೆ. ಈ ಹಿಂದೆ ಹಲವರು ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಮದುವೆ ಮಂಟಪದಲ್ಲಿ ಗರ್ಭೀಣಿಯರು ಕಂಡುಬಂದಿದ್ದರುʼʼ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: Child in Borewell: ಮಧ್ಯಪ್ರದೇಶದಲ್ಲಿ ಬೋರ್‌ವೆಲ್‌ಗೆ ಬಿದ್ದ 8 ವರ್ಷದ ಮಗು, ರಕ್ಷಣಾ ಕಾರ್ಯಾಚರಣೆ

Exit mobile version