ನವದೆಹಲಿ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ (Mahadev Online Betting App) ಅಕ್ರಮ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮೆಡಿಯನ್-ಆ್ಯಕ್ಟರ್ ಕಪಿಲ್ ಶರ್ಮಾ(Kapil Sharma), ನಟಿಯರಾದ ಹುಮಾ ಖುರೇಷಿ (Huma Qureshi) ಮತ್ತು ಹಿನಾ ಖಾನ್ (Hina Khan) ಅವರಿಗೂ ಸಂಕಟ ಎದುರಾಗಿದೆ. ಈ ಆ್ಯಪ್‌ನ ಹವಾಲಾ ಹಗರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು(Enforcement Directorate), ವಿಚಾರಣೆಗೆ ಹಾಜರಾಗುವಂತೆ ಕಪಿಲ್ ಶರ್ಮಾ, ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಆ್ಯಪ್ ಪರ ಪ್ರಚಾರ ನಡೆಸಿದ್ದ ರಣಬೀರ್ ಕಪೂರ್ ಅವರಿಗೆ ನಿನ್ನೆಯಷ್ಟೇ ತನಿಖಾ ಸಂಸ್ಥೆ ಸಮನ್ಸ್ ನೀಡಿತ್ತು(Mahadev App Case).
ಅಪರಾಧದ ಆದಾಯದಿಂದ ಅವರಿಗೆ ದೊಡ್ಡ ಮೊತ್ತದ ಹಣವನ್ನು ವಿನಿಮಯವಾಗಿ ನೀಡಲಾಗಿದೆ ಎಂದು ತನಿಖಾ ಸಂಸ್ಥೆ ಇಡಿ ಹೇಳಿಕೊಂಡಿದೆ. ಆ್ಯಪ್ ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಳ್ ಅವರು ಸಾಕಷ್ಟು ಬಾಲಿವುಡ್ ನಟ, ನಟಿಯರಿಗೆ ತಮ್ಮ ಆ್ಯಪ್ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡಿದ್ದಾರೆ ಎಂದು ತಿಳಿದು ಬಿಂದಿದೆ. ಅಲ್ಲದೇ, ಯುಎಇನಲ್ಲಿ ನಡೆದ ಚಂದ್ರಕರ್ ಮದುವೆಗೆ ಬಾಲಿವುಡ್‌ನ ಘಟಾನುಘಟಿಗಳೆಲ್ಲರೂ ಪಾಲ್ಗೊಂಡಿದ್ದರು. ಈ ಮದುವೆಯ ಒಟ್ಟು ವೆಚ್ಚ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಲಾಗಿತ್ತು.
ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್ ವಿವಾದದ ಕೇಂದ್ರಬಿಂದುವಾಗಿದ್ದು, ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಹೊಸ ಬಳಕೆದಾರರನ್ನು ದಾಖಲಿಸಲು, ಬಳಕೆದಾರರ ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಕಳುಹಿಸುವ, ಇದಕ್ಕಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ವ್ಯವಸ್ಥೆಗೊಳಿಸುವ ಒಂದು ಸಿಂಡಿಕೇಟ್ ಆಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: 200 ಕೋಟಿ ರೂ. ಅದ್ಧೂರಿ ಮದ್ವೆ, ಎಲ್ಲ ನಗದು ರೂಪದಲ್ಲೇ ಪಾವತಿ! ಬೆಟ್ಟಿಂಗ್ ಆ್ಯಪ್ ಮಾಲೀಕನ ದಿಢೀರ್ ಶ್ರೀಮಂತಿಕೆ
ನಟ ರಣಬೀರ್ ಕಪೂರ್ ಅವರಿಗೂ ಸಂಕಷ್ಟ
ಕುಖ್ಯಾತ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಣಬೀರ್ ಕಪೂರ್ (Actor Ranbir Kapoor) ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಅಕ್ಟೋಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಇ ಡಿ ಸಮನ್ಸ್ ನೀಡಿದ್ದು(Summons), ನಟ ಸಮನ್ಸ್ ಸ್ವೀಕರಿಸಿದ್ದಾರೆ. ರಣಬೀರ್ ಕಪೂರ್ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ಇ ಡಿ ದಾಖಲಿಸಲಿದೆ ಎಂದು ತಿಳಿದು ಬಂದಿದೆ. ರಣಬೀರ್ ಕಪೂರ್ ಅವರ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪರವಾಗಿ ಪ್ರಚಾರ ಮಾಡಿದ್ದರು.
ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಅವರು ಆ್ಯಪ್ ಅನ್ನು ಯಾವಾಗ ಪ್ರಚಾರ ಮಾಡಲು ಪ್ರಾರಂಭಿಸಿದರು, ಈ ಪ್ರಚಾರಗಳಿಗಾಗಿ ಅವರು ಪಡೆದ ಹಣದ ಮೊತ್ತ ಮತ್ತು ಪಾವತಿಯ ವಿಧಾನವನ್ನು (ಚೆಕ್ ಮೂಲಕ ಅಥವಾ ನಗದು ರೂಪದಲ್ಲಿ) ಯಾವದಾಗಿತ್ತು ಮತ್ತು ಪ್ರಚಾರಕ್ಕಾಗಿ ಅವರನ್ನು ಯಾರು ಸಂಪರ್ಕಿಸಿದರು ಎಂಬಿತ್ಯಾದಿ ವಿಷಯಗಳ ಕುರಿತು ಇ ಡಿ ವಿಚಾರಣೆ ನಡೆಸಲಿದೆ.