Site icon Vistara News

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

Kapil Sibal

Kapil Sibal becomes president of Supreme Court Bar Association, defeats Pradeep Rai

ನವದೆಹಲಿ: ಸುಪ್ರೀಂ ಕೋರ್ಟ್‌ ಹಿರಿಯ ವಕೀಲ, ಕೇಂದ್ರದ ಮಾಜಿ ಸಚಿವರೂ ಆದ ಕಪಿಲ್‌ ಸಿಬಲ್‌ (Kapil Sibal) ಅವರು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ (Supreme Court Bar Association) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ಗೆ ಗುರುವಾರ (ಮೇ 16) ಚುನಾವಣೆ ನಡೆದಿದ್ದು, ಕಪಿಲ್‌ ಸಿಬಲ್‌ ಅವರು ಪ್ರದೀಪ್‌ ರೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೇ 8ರಂದು ಚುನಾವಣೆಗೆ ಸ್ಪರ್ಧಿಸುವುದಾಗಿ ಕಪಿಲ್‌ ಸಿಬಲ್‌ ಘೋಷಣೆ ಮಾಡಿದ್ದರು.

ಕಪಿಲ್‌ ಸಿಬಲ್‌ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಅವರು ಆಯ್ಕೆಯಾಗಿದ್ದಾರೆ. ಇದು ಉದಾರವಾದಿಗಳು, ಜಾತ್ಯತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು ಹಾಗೂ ಪ್ರಗತಿಪರರಿಗೆ ಸಿಕ್ಕ ದೊಡ್ಡ ಗೆಲುವಾಗಿದೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿಯೂ ಬದಲಾಗಲಿದ್ದಾರೆ” ಎಂದು ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಕಪಿಲ್‌ ಸಿಬಲ್‌ ಹಿನ್ನೆಲೆ ಏನು?

ದೇಶದ ಪ್ರಮುಖ ವಕೀಲರಲ್ಲಿ ಕಪಿಲ್‌ ಸಿಬಲ್‌ ಅವರು ಒಬ್ಬರಾಗಿದ್ದಾರೆ. ಪಂಜಾಬ್‌ನ ಜಲಂಧರ್‌ನವರಾದ ಕಪಿಲ್‌ ಸಿಬಲ್‌ ಅವರು ಹಾರ್ವರ್ಡ್‌ ಲಾ ಸ್ಕೂಲ್‌ನಲ್ಲಿ ಪದವಿ ಪಡೆದು, ವಕೀಲಿಕೆ ಆರಂಭಿಸಿದರು. 1983ರಲ್ಲಿ ಇವರು ಹಿರಿಯ ವಕೀಲ ಎಂಬ ಖ್ಯಾತಿ ಗಳಿಸಿದರು. ಇವರು 1989ರಿಂದ 1990ರವರೆಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದರು. ಇವರು 1995ರಿಂದ 2002ರ ಅವಧಿಯಲ್ಲಿ ಮೂರು ಬಾರಿ ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಕಾಂಗ್ರೆಸ್ ನಾಯಕರೂ ಆಗಿರುವ ಕಪಿಲ್‌ ಸಿಬಲ್‌ ಅವರು ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸಚಿವರೂ ಆಗಿದ್ದರು. ರಾಜ್ಯಸಭೆ ಸದಸ್ಯರಾಗಿ, 2004ರಲ್ಲಿ ಚಾಂದಿನಿ ಚೌಕ್‌ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸ್ಮೃತಿ ಇರಾನಿ ಅವರನ್ನು ಸೋಲಿಸಿದ್ದರು. ಇದುವರೆಗೆ ಹಿರಿಯ ವಕೀಲ ಆದಿಶ್‌ ಅಗರ್ವಾಲ ಅವರು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದರು. ಈಗ ಕಪಿಲ್‌ ಸಿಬಲ್‌ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Exit mobile version