ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಜಿ 23 ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದ ಕಪಿಲ್ ಸಿಬಲ್ (Kapil Sibal) ಇಂದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಕಪಿಲ್ ಸಿಬಲ್ ತಾವು, ಮೇ 16ರಂದೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ರಾಜ್ಯಸಭೆಗೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ನನಗೆ ಸಮಾಜವಾದಿ ಪಕ್ಷ ಬೆಂಬಲ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಕಪಿಲ್ ಸಿಬಲ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂಬುದನ್ನು ಅಖಿಲೇಶ್ ಯಾದವ್ ಕೂಡ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಹಿರಿಯ ವಕೀಲರೂ ಆಗಿರುವ ಕಪಿಲ್ ಸಿಬಲ್ ಬಹಳ ಹಿಂದಿನಿಂದಲೂ ಅಖಿಲೇಶ್ ಯಾದವ್ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. 2017ರಲ್ಲಿ ಮುಲಾಯಂ ಸಿಂಗ್ ಯಾದವ್ ಬಣ ಮತ್ತು ಅಖಿಲೇಶ್ ಯಾದವ್ ಬಣದ ಮಧ್ಯೆ ಸೈಕಲ್ ಚಿಹ್ನೆಗಾಗಿ ವಾದ-ಪ್ರತಿವಾದ ನಡೆದ ಸಂದರ್ಭದಲ್ಲಿ ಚುನಾವಣಾ ಆಯೋಗದ ಎದುರು ಅಖಿಲೇಶ್ ಯಾದವ್ ಪರ ಇದೇ ಕಪಿಲ್ ಸಿಬಲ್ ವಾದಿಸಿದ್ದರು. ಸೈಕಲ್ ಗುರುತನ್ನು ಅಖಿಲೇಶ್ ಯಾದವ್‌ಗೇ ನೀಡಬೇಕು ಎಂದು ಹೇಳಿದ್ದರು. ಇಂದು ಕಪಿಲ್ ಸಿಬಲ್, ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅಖಿಲೇಶ್ ಯಾದವ್, ಕಪಿಲ್ ಅವರೊಬ್ಬ ಪ್ರಭಾವಿ ವಕೀಲ. ಅವರಿಗೆ ದೀರ್ಘ ರಾಜಕೀಯ ಅನುಭವವೂ ಇದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ. ಈ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುತ್ತಾರೆ ಮತ್ತು ಜನರ, ಸರ್ಕಾರದ ಗಮನ ಸೆಳೆಯುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಕಪಿಲ್ ಸಿಬಲ್ ಕಾಂಗ್ರೆಸ್‌ನ ಹಿರಿಯ ನಾಯಕರು. 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ದೆಹಲಿಯ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದವರು. ಈ ಮಧ್ಯೆ 2009ರಿಂದ 2014ರವರೆಗೆ ಕೇಂದ್ರದಲ್ಲಿ ಇದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಾನೂನು ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆ ಕೂಡ ಸುಪ್ರೀಂಕೋರ್ಟ್‌ನಲ್ಲಿ ಹಲವು ಹೈಪ್ರೊಫೈಲ್ ಕೇಸ್‌ಗಳನ್ನು ನಡೆಸಿದ್ದಾರೆ. ಇನ್ನು ರಾಜಕೀಯವಾಗಿ ಹೇಳುವುದಾದರೆ 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತ ಬಳಿಕ ಕಪಿಲ್ ಸಿಬಲ್ ಕೂಡ ತೀವ್ರ ಅಸಮಾಧಾನಗೊಂಡಿದ್ದರು. ಗಾಂಧಿ ಕುಟುಂಬದ ಬಗ್ಗೆ ಸಮಯ ಸಿಕ್ಕಾಗಲೆಲ್ಲ ಸೂಕ್ಷ್ಮವಾಗಿಯೇ ವಾಗ್ದಾಳಿ ನಡೆಸಿದ್ದರು ಪಕ್ಷಕ್ಕೆ ಹೊಸ ನಾಯಕ ಬೇಕು, ತಳಮಟ್ಟದಿಂದ ಸಂಘಟನೆಯಾಗಬೇಕು ಎಂಬಿತ್ಯಾದಿ ಒತ್ತಾಯಗಳನ್ನು ಮಾಡುತ್ತಲೇ ಬಂದಿದ್ದರು.
ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತ ಬಳಿಕವಂತೂ ಕಪಿಲ್ ಅಸಮಾಧಾನ ಇನ್ನಷ್ಟು ಹೆಚ್ಚಿತ್ತು. ಗಾಂಧಿ ಕುಟುಂಬದವರು ಪಕ್ಷದ ಉನ್ನತ ಸ್ಥಾನದಿಂದ ಇಳಿಯಬೇಕು. ಹೊಸಬರಿಗೆ ಅವಕಾಶ ಕೊಡಬೇಕು ಎಂದು ನೇರವಾಗಿಯೇ ಹೇಳಿದ್ದರು. ಹಾಗೇ, ಇನ್ನುಳಿದ ಜಿ 23 (ರೆಬಲ್) ನಾಯಕರಿಗೆ ತಮ್ಮ ಮನೆಯಲ್ಲಿ ಔತಣಕೂಟ ಏರ್ಪಡಿಸಿ, ಚರ್ಚೆಯನ್ನೂ ನಡೆಸಿದ್ದರು. ಅಂತಿಮವಾಗಿ ಪಕ್ಷವನ್ನೇ ತೊರೆದಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಟಾಸ್ಕ್‌ಫೋರ್ಸ್ ರಚಿಸಿದ ಸೋನಿಯಾ ಗಾಂಧಿ
.