ನವದೆಹಲಿ: ೨೦೧೭ರಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ಹಾದಿಯಾ ಲವ್ ಜಿಹಾದ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ, ವಕೀಲ ಕಪಿಲ್ ಸಿಬಲ್ ಸೇರಿ ಹಲವು ವಕೀಲರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) (PFI Banned) ಒಂದು ಕೋಟಿ ರೂ. ಖರ್ಚು ಮಾಡಿತ್ತು ಎಂದು ತಿಳಿದುಬಂದಿದೆ.
ಹಾದಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಕಪಿಲ್ ಸಿಬಲ್, ದುಷ್ಯಂತ್ ದವೆ, ಇಂದಿರಾ ಜೈಸಿಂಗ್ ಹಾಗೂ ಮರ್ಜೂಕ್ ಬಫಾಕಿ ಅವರಿಗೆ ೯೩.೮೫ ಲಕ್ಷ ರೂ. ನೀಡಿದೆ. ಒಂದಿಡೀ ಪ್ರಕರಣದ ಕುರಿತು ವಾದ ಮಂಡಿಸಲು ಸುಪ್ರೀಂ ಕೋರ್ಟ್‌ನಲ್ಲಿ ಪಿಎಫ್‌ಐ ಒಟ್ಟು ೯೯.೫೨ ಲಕ್ಷ ರೂ. ವ್ಯಯಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇರಳದಲ್ಲಿ ೨೦೧೭ರಲ್ಲಿ ಹಿಂದೂ ಯುವತಿ ಅಖಿಲಾ ಅವರು ಮುಸ್ಲಿಂ ಯುವಕ ಶಾಫಿನ್ ಜಹಾನ್ ಎಂಬುವನನ್ನು ಪ್ರೀತಿ ಮದುವೆಯಾಗಿದ್ದಳು. ಆದರೆ, ಮದುವೆ ಬಳಿಕ ಆಕೆ ಮತಾಂತರಗೊಂಡು, ತನ್ನ ಹೆಸರನ್ನು ಹಾದಿಯಾ ಎಂದು ಬದಲಿಸಿಕೊಂಡ ಕಾರಣ ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಲಾಗಿತ್ತು.
ಯುವತಿಯ ತಂದೆಯೇ ಈ ಕುರಿತು ದೂರು ನೀಡಿದ್ದರು. ಕೇರಳ ಹೈಕೋರ್ಟ್ ಸಹ ಇಬ್ಬರ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಮದುವೆಯನ್ನು ಊರ್ಜಿತಗೊಳಿಸಿತ್ತು. ಪ್ರಕರಣದಲ್ಲಿ ನಾಲ್ವರೂ ವಕೀಲರು ಶಾಫಿನ್ ಜಹಾನ್ ಪರ ವಾದ ಮಂಡಿಸಿದ್ದರು. ದೇಶದ್ರೋಹ, ಹಿಂಸೆಗೆ ಪ್ರಚೋದನೆ, ಉಗ್ರರಿಗೆ ಹಣಕಾಸು ನೆರವು ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐಅನ್ನು ಬ್ಯಾನ್ ಮಾಡಿದೆ.
ಇದನ್ನೂ ಓದಿ | PFI Banned | ಮುಸ್ಲಿಂ ಸಂಘಟನೆಗಳ ಜತೆ ಚರ್ಚೆ ಬಳಿಕವೇ ಪಿಎಫ್‌ಐ ಬ್ಯಾನ್, ಇದು ಮೋದಿ ಮಾಸ್ಟರ್‌ಪ್ಲ್ಯಾನ್