ನವ ದೆಹಲಿ: ಜುಲೈ 26 ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ. 1999ರ ಜುಲೈ 26ರಂದು ಭಾರತೀಯ ಯೋಧರು ಕಾರ್ಗಿಲ್ ಯುದ್ಧದಲ್ಲಿ, ಆಪರೇಶನ್ ವಿಜಯ್ ಮೂಲಕ ಪಾಕಿಸ್ತಾನದ ಸೈನಿಕರನ್ನು ಬಗ್ಗುಬಡೆದು, ವಿಜಯಪತಾಕೆ ಹಾರಿಸಿದ ದಿನ. ಕಾರ್ಗಿಲ್ ವಿಜಯೋತ್ಸವ ಆಚರಣೆ ಮತ್ತು ಯುದ್ಧದಲ್ಲಿ ಮಡಿದ ಯೋಧರ ಸ್ಮರಿಸಲು ಪ್ರತಿವರ್ಷ ಈ ದಿನವನ್ನು ಮೀಸಲಾಗಿಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ ಸಿಂಗ್, ಮೂರು ಸೇನೆಗಳ ಮುಖ್ಯಸ್ಥರೆಲ್ಲ ಸೇರಿ ಇಂದು ಕಾರ್ಗಿಲ್ ಯುದ್ಧದಲ್ಲಿ ಮಡಿದವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಇಂದು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ʼಕಾರ್ಗಿಲ್ ವಿಜಯ ದಿನವೆಂಬುದು ಭಾರತ ಮಾತೆಯ ಹೆಮ್ಮೆ ಮತ್ತು ಮುಕುಟದಂತೆ ಇರುವ ದಿವಸ. ತಾಯ್ನಾಡಿನ ರಕ್ಷಣೆಗಾಗಿ ಶೌರ್ಯದಿಂದ ತ್ಯಾಗ ಮಾಡಿದ ಪ್ರತಿಯೊಬ್ಬ ಯೋಧನಿಗೂ ನನ್ನ ಸೆಲ್ಯುಟ್. ಜೈ ಹಿಂದ್ʼ ಎಂದು ಹೇಳಿದ್ದಾರೆ. ಯೋಧರ ಶೌರ್ಯ, ಬದ್ಧತೆಯನ್ನು ತೋರಿಸುವ ಒಂದು ಚೆಂದನೆಯ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: kargil vijay diwas: ಭಾರತದ ಬೆನ್ನಿಗೆ ಇರಿದ ಪಾಕಿಗಳನ್ನು ನಮ್ಮ ಯೋಧರು ಮಟ್ಟ ಹಾಕಿದ್ದು ಹೇಗೆ?
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿ, ನಮ್ಮ ಸೇನಾ ಪಡೆಗಳ ಶೌರ್ಯ, ಶಕ್ತಿ ಮತ್ತು ದೃಢತೆಯ ಸಂಕೇತ ಈ ಕಾರ್ಗಿಲ್ ವಿಜಯ ದಿನ. ತಾಯಿ ಭಾರತೆಯ ರಕ್ಷಣೆಗೆ ಅಂದು ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹೋರಾಡಿದ ಪ್ರತಿಯೊಬ್ಬರಿಗೂ ನಾನು ತಲೆ ಬಾಗುತ್ತೇನೆ. ಈ ಯೋಧರಿಗೆ ಮತ್ತು ಅವರ ಕುಟುಂದವರಿಗೆ ಇಡೀ ದೇಶದ ನಾಗರಿಕರು ಸದಾ ಋಣಿಯಾಗಿರುತ್ತಾರೆ ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಹೋಗಿ ಮೃತ ಯೋಧರ ಸಮಾಧಿಗೆ ಗೌರವ ಅರ್ಪಿಸಿದರು. ಹಾಗೇ, ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಏರ್‌ಫೋರ್ಸ್ ಮುಖ್ಯ ಏರ್ ಮಾರ್ಷಲ್ ವಿ.ಆರ್.ಚೌಧರಿಯವರೂ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಇದನ್ನೂ ಓದಿ: Kargil Vijay Divas: ಅಮ್ಮಾ ಗೆದ್ದರೆ, ತಿರಂಗಾ ಅರಳಿಸಿ ಬರುತ್ತೇನೆ, ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!