Site icon Vistara News

ಅರವಿಂದ್‌ ಕೇಜ್ರಿವಾಲ್‌ ಬಂಧನ ‘ಕರ್ಮದ ಫಲ’ ಎಂದ ಪ್ರಣಬ್‌ ಮುಖರ್ಜಿ ಪುತ್ರಿ; ಏನದು ಕರ್ಮ?

Arvind Kejriwal And Sharmishtha Mukherjee

Karma Catches Up: Pranab Mukherjee's Daughter Sharmistha Mukherjee On Arvind Kejriwal's Arrest

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರನ್ನು ಬಂಧಿಸಲಾಗಿದೆ. ಬಂಧನದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆಸಲು ಆಪ್‌ ಕಾರ್ಯಕರ್ತರಿಗೆ ಕರೆ ನೀಡಲಾಗಿದ್ದರೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಇದರ ಬೆನ್ನಲ್ಲೇ, ಬಂಧನದ ಕುರಿತು ಪ್ರಣಬ್‌ ಮುಖರ್ಜಿ (Pranab Mukherjee) ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಅವರು ಪ್ರತಿಕ್ರಿಯಿಸಿದ್ದು, “ಇದೆಲ್ಲ ಕರ್ಮದ ಪ್ರತಿಫಲ” ಎಂದಿದ್ದಾರೆ.

“ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಅವರು ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಅರವಿಂದ್‌ ಕೇಜ್ರಿವಾಲ್‌ ಹಾಗೂ ಅಣ್ಣಾ ಹಜಾರೆ ಅವರ ತಂಡವು ಹುರುಳಿಲ್ಲದ ಆರೋಪ ಮಾಡಿತು. ಬೇಜವಾಬ್ದಾರಿಯುತ, ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಆರೋಪಗಳನ್ನು ಇವರೆಲ್ಲ ಮಾಡಿದರು. ಶೀಲಾ ದೀಕ್ಷಿತ್‌ ಅವರ ವಿರುದ್ಧ ಟ್ರಂಕ್‌ಗಟ್ಟಲೆ ಸಾಕ್ಷ್ಯಾಧಾರಗಳು ಇವೆ ಎಂದು ಇವರು ಹೇಳಿದ್ದರು. ಆದರೆ, ಒಂದೇ ಒಂದು ದಾಖಲೆಯನ್ನೂ ಇವರು ಬಹಿರಂಗಪಡಿಸಲಿಲ್ಲ. ಆದರೆ, ಕರ್ಮದ ಪ್ರತಿಫಲದಿಂದಾಗಿ ಇಂದು ಅರವಿಂದ್‌ ಕೇಜ್ರಿವಾಲ್‌ ಅವರು ಜೈಲುಪಾಲಾಗಿದ್ದಾರೆ” ಎಂದು ಹೇಳಿದ್ದಾರೆ.

“ಶೀಲಾ ದೀಕ್ಷಿತ್‌ ಅವರ ಸರ್ಕಾರದ ವಿರುದ್ಧ ಯಾರಾದರೂ ಆಧಾರರಹಿತವಾಗಿ, ಬೇಜವಾಬ್ದಾರಿತನದಿಂದ ಹೇಳಿಕೆ ನೀಡಿದ್ದರೆ, ಅದಕ್ಕೆ ಅರವಿಂದ್‌ ಕೇಜ್ರಿವಾಲ್‌ ಹಾಗೂ ಅಣ್ಣಾ ಹಜಾರೆ ಗ್ಯಾಂಗ್‌ ಕಾರಣವಾಗಿದೆ. ಕರ್ಮ ಎಂದಿಗೂ ವಾಪಸ್‌ ತಿರುಗೇಟು ನೀಡುತ್ತದೆ. ಶೀಲಾ ದೀಕ್ಷಿತ್‌ ಅವರ ವಿರುದ್ಧ ಆಧಾರರಹಿತ ಆರೋಪ ಮಾಡಿದವರೇ ಇಂದು ಕಠಿಣ ಕ್ರಮ ಎದುರಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ” ಎಂದು ಶರ್ಮಿಷ್ಠಾ ಮುಖರ್ಜಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ತಂದೆಗೆ ಕಾಂಗ್ರೆಸ್‌ ಬಿಟ್ಟಿಯಾಗಿ ಸ್ಥಾನಮಾನ ಕೊಟ್ಟಿಲ್ಲ; ಪ್ರಣಬ್‌ ಮುಖರ್ಜಿ ಪುತ್ರಿ ಕೆಂಡ

ಕೆಲ ದಿನಗಳ ಹಿಂದಷ್ಟೇ ಶರ್ಮಿಷ್ಠಾ ಮುಖರ್ಜಿ ಅವರು ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. “ನಾನೊಬ್ಬ ಕಾಂಗ್ರೆಸ್‌ ಬೆಂಬಲಿಗಳಾಗಿ, ದೇಶದ ಜವಾಬ್ದಾರಿಯುತ ನಾಗರಿಕಳಾಗಿ ಕಾಂಗ್ರೆಸ್‌ ಸ್ಥಿತಿಯ ಬಗ್ಗೆ ಮರುಕವಿದೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲನುಭವಿಸಿತು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷವು ಹಿನ್ನಡೆ ಅನುಭವಿಸಿತು. ಯಾವುದೇ ಒಬ್ಬ ನಾಯಕನ ನೇತೃತ್ವದಲ್ಲಿ ಪಕ್ಷ ಸೋಲನುಭವಿಸಿದೆ ಎಂತಾದರೆ, ಆ ಪಕ್ಷದ ನಾಯಕತ್ವವನ್ನು ಬದಲಿಸಬೇಕು. ನೆಹರು-ಗಾಂಧಿ ಕುಟುಂಬದಿಂದ ಕಾಂಗ್ರೆಸ್‌ ಹೊರಬರಬೇಕು” ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version