Site icon Vistara News

ನಾಳೆ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಪ್ರಮಾಣ ಸ್ವೀಕರಿಸಲಿದ್ದಾರೆ ಕರ್ನಾಟಕ ಹೈಕೋರ್ಟ್ ಸಿಜೆ ಪ್ರಸನ್ನ ವರಾಳೆ

Karnataka High Court CJ Prasanna Varale will take oath as Supreme Court judge tomorrow

ನವದೆಹಲಿ: ಕರ್ನಾಟಕ ಹೈಕೋರ್ಟ್ (Karnataka High Court) ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ (CJ Prasanna B Varale) ಅವರನ್ನು ನಾಳೆ ಅಂದರೆ, ಗುರುವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ (Supreme Court judge) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವರಾಳೆ ಅವರ ನೇಮಕದೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಸಂಖ್ಯೆ 34ಕ್ಕೆ ಏರಿಕೆಯಾಗಲಿದೆ.

61 ವರ್ಷ ವಯಸ್ಸಿನ ವರಾಳೆ ಅವರು ಎರಡು ದಶಕಗಳಿಂದ ಕಾನೂನು ಕ್ಷೇತ್ರದಲ್ಲಿದ್ದಾರೆ. ವಿಶೇಷವಾಗಿ ಸಿವಿಲ್, ಕ್ರಿಮಿನಲ್, ಕಾರ್ಮಿಕ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ತಜ್ಞರಾಗಿದ್ದಾರೆ. ಈ ಹಿಂದೆ ಬಾಂಬೆ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. 2022ರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.

ನ್ಯಾಯಮೂರ್ತಿ ವರಾಳೆ ಅವರು ಆಗಸ್ಟ್ 1985ರಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆರಂಭಿಕ ವರ್ಷಗಳಲ್ಲಿ ವಕೀಲ ಎಸ್ ಎನ್ ಲೋಯಾ ಅವರ ಅಡಿಯಲ್ಲಿ ಪ್ರಾಕ್ಟೀಸ್‌ ಮಾಡಿದರು. 1992ರವರೆಗೆ ಔರಂಗಾಬಾದ್‌ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 2008ರ ಜುಲೈ 18ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ವರಾಳೆ ಅವರು ಅಕ್ಟೋಬರ್ 15, 2022ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

ಕೊಲಿಜಿಯಂ ನಿರ್ಣಯದಲ್ಲಿ ಹೇಳಿದ್ದೇನು?

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಕೊಲಿಜಿಯಂ ನಿರ್ಣಯದ ಪ್ರಕಾರ, ನ್ಯಾಯಮೂರ್ತಿ ವರಾಳೆ ಅವರು ಅಸಾಧಾರಣ ನಡವಳಿಕೆ ಮತ್ತು ಸಮಗ್ರತೆಯನ್ನು ಹೊಂದಿರುವ ಸಮರ್ಥ ನ್ಯಾಯಾಧೀಶರಾಗಿದ್ದಾರೆ ಮತ್ತು ಉನ್ನತ ಮಟ್ಟದ ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಂಡಿದ್ದಾರೆ.

“ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮೊದಲು, ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಿವಿಲ್, ಕ್ರಿಮಿನಲ್, ಕಾರ್ಮಿಕ ಮತ್ತು ಆಡಳಿತಾತ್ಮಕ ಕಾನೂನು ವಿಷಯಗಳಲ್ಲಿ ಮತ್ತು ಔರಂಗಾಬಾದ್‌ನ ಹೈಕೋರ್ಟ್ ಪೀಠದಲ್ಲಿ ಸಾಂವಿಧಾನಿಕ ವಿಷಯಗಳಲ್ಲಿ 23 ವರ್ಷಗಳ ಕಾಲ ಬಾರ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ಅಖಿಲ ಭಾರತ ಜ್ಯೇಷ್ಠತೆಯಲ್ಲಿ ನ್ಯಾಯಮೂರ್ತಿ ವರಾಳೆ ಅವರು 6ನೇ ಸ್ಥಾನದಲ್ಲಿದ್ದಾರೆ. ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರ ಹಿರಿತನದಲ್ಲಿ, ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮೂರನೇ ದಲಿತ ನ್ಯಾಯಮೂರ್ತಿ

ನ್ಯಾ. ವರಾಳೆ ಅವರ ನೇಮಕಾತಿ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಿದ್ದರಿಂದ ಪ್ರಸಕ್ತ ಸುಪ್ರೀಂ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯದ ಮೂರನೇ ನ್ಯಾಯಮೂರ್ತಿ ವರಾಳೆ ಅವರಾಗಿದ್ದಾರೆ. ನ್ಯಾ. ಬಿ ಆರ್ ಗವಾಯಿ ಮತ್ತು ನ್ಯಾ. ಸಿ ಟಿ ರವಿಕುಮಾರ್ ಅವರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯ ಇನ್ನಿಬ್ಬರು ನ್ಯಾಯಮೂರ್ತಿಗಳು. ಪರಿಶಿಷ್ಟ ಜಾತಿಗೆ ಸೇರಿದ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಪಿ ಬಿ ವರಾಳೆ ಅವರು ದೇಶಾದ್ಯಂತದ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court: ಬೆಂಕಿಯೊಂದಿಗೆ ಆಟ ಬೇಡ! ಪಂಜಾಬ್, ತಮಿಳು ನಾಡು ರಾಜ್ಯಪಾಲರ ವಿರುದ್ಧ ಕೋರ್ಟ್ ಕೆಂಡ

Exit mobile version