ನವ ದೆಹಲಿ: 2021ನೇ ವರ್ಷದಲ್ಲಿ ಕರ್ನಾಟಕದಲ್ಲಿ 34,647 ರಸ್ತೆ ಅಪಘಾತಗಳು ನಡೆದಿವೆ. ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ರಸ್ತೆ ಅಪಘಾತಗಳು ನಡೆದ ಮೂರನೇ ರಾಜ್ಯ ಕರ್ನಾಟಕ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಹೇಳಿದೆ. ಕರ್ನಾಟಕದಲ್ಲಿ ನಡೆದ 34,647 ಅಪಘಾತಗಳಿಂದ 40754 ಜನ ಗಾಯಗೊಂಡಿದ್ದು, 10,038 ಮೃತಪಟ್ಟಿದ್ದಾರೆ ಎಂದೂ NCRB ಡಾಟಾದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು 2021ನೇ ವರ್ಷದಲ್ಲಿ ಅತ್ಯಂತ ಹೆಚ್ಚು ರಸ್ತೆ ಅಪಘಾತಗಳು ನಡೆದದ್ದು ತಮಿಳುನಾಡಿನಲ್ಲಿ. ಇಲ್ಲಿ 55,682 ಆ್ಯಕ್ಸಿಡೆಂಟ್ಗಳು ಆಗಿದ್ದು, ಎರಡನೇ ಸ್ಥಾನದಲ್ಲಿ ಮಧ್ಯಪ್ರದೇಶ (48,219 ರಸ್ತೆ ಅಪಘಾತಗಳು) ರಾಜ್ಯವಿದೆ. ತಮಿಳುನಾಡು ಮತ್ತು ಮಧ್ಯಪ್ರದೇಶದ ನಂತರದ ಸ್ಥಾನವನ್ನು ಕರ್ನಾಟಕ ಪಡೆದಿದೆ. ರಸ್ತೆ ಅಪಘಾತಕ್ಕೆ ಹಲವು ಕಾರಣಗಳು ಇರುತ್ತವೆ. ವಾಹನ ಸವಾರರ ನಿರ್ಲಕ್ಷ್ಯ, ಅತಿಯಾದ ವೇಗ, ಗುಂಡಿಬಿದ್ದ, ಹಾಳಾದ ರಸ್ತೆಗಳೆಲ್ಲ ಅಪಘಾತಕ್ಕೆ ಕಾರಣಗಳು. ಸದ್ಯ ಕರ್ನಾಟದಲ್ಲಿ, ಗುಂಡಿಬಿದ್ದ ರಸ್ತೆಗಳ ಬಗ್ಗೆ ಅತಿಯಾದ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿ, ಎಲ್ಲೇ ನೋಡಿದರೆ ಹಾಳಾದ ರಸ್ತೆಗಳು ಇವೆ. ಅದನ್ನು ದುರಸ್ತಿ ಮಾಡುವ ಕೆಲಸ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಈ ಮಧ್ಯೆ ರಸ್ತೆ ಅಪಘಾತದ ವರದಿ ಹೊರಬಿದ್ದು, ಅದರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಇದು ವಾಹನ ಸವಾರರು ಮತ್ತು ಆಡಳಿತಗಳು ಗಂಭೀರವಾಗಿ ಯೋಚಿಸಬೇಕಾದ ವಿಷಯ.
ಇನ್ನು ಇಡೀ ದೇಶದ ಲೆಕ್ಕಾಚಾರಕ್ಕೆ ಬಂದರೆ, ಭಾರತದಲ್ಲಿ 2021ನೇ ಇಸ್ವಿಯಲ್ಲಿ ಒಟ್ಟಾರೆ 4,03,116 ಅಪಘಾತಗಳು ಉಂಟಾಗಿವೆ. ಇದರಲ್ಲಿ 1,55,622 ಮೃತಪಟ್ಟಿದ್ದು, 3,71,884 ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಕಳೆದ ವರ್ಷ ಒಟ್ಟಾರೆಯಾಗಿ ನಡೆದ ಅಪಘಾತಕ್ಕೆ ಮುಖ್ಯವಾದ ಎರಡು ಕಾರಣಗಳು ವಾಹನ ಸವಾರರ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದು. ಇಲ್ಲಿ ಅತಿಯಾದ ವೇಗದಿಂದ ಆದ ಅಪಘಾತಕ್ಕೆ 87,050 ಮಂದಿ ಬಲಿಯಾಗಿದ್ದರೆ, ನಿರ್ಲಕ್ಷ್ಯತನದಿಂದ ಮಾಡಿದ ಚಾಲನೆಯಿಂದ ಆದ ಆ್ಯಕ್ಸಿಡೆಂಟ್ನಿಂದ 42,853 ಜನರ ಜೀವ ಹೋಗಿದೆ.
ರಸ್ತೆ ಅಪಘಾತದ ಸಾವಿನ ದರ 2020ಕ್ಕಿಂತಲೂ 2021ರಲ್ಲಿ ಶೇ. 16.8ರಷ್ಟು ಹೆಚ್ಚಾಗಿದೆ. 2020ರಲ್ಲಿ ರಸ್ತೆ ಅಪಘಾತ ಕಾರಣಕ್ಕೆ 1,33,201 ಮಂದಿ ಪ್ರಾಣ ಕಳೆದುಕೊಂಡಿದ್ದರು. 2021ರಲ್ಲಿ 1,55,622 ಜೀವ ಹೋಗಿದೆ. ಅದರಲ್ಲೂ 2021ರಲ್ಲಿ ದ್ವಿಚಕ್ರ ವಾಹನಗಳಿಂದಾದ ಅಪಘಾತಗಳಲ್ಲಿ ಮಡಿದವರೇ ಹೆಚ್ಚು. ಒಟ್ಟಾರೆ ಸಾವಿನ ಶೇ.44.5ರಷ್ಟು (69,240) ಸಾವು ಆಗಿದ್ದು ದ್ವಿಚಕ್ರ ವಾಹನ ಅಪಘಾತದಿಂದ. ಇನ್ನು ಕಾರು ಅಪಘಾತದಲ್ಲಿ 23,531 (ಶೇ.15.1) ಜನ ಮೃತಪಟ್ಟಿದ್ದರೆ, ಟ್ರಕ್/ಲಾರಿ ಅಪಘಾತಕ್ಕೆ 14,622 ( ಶೇ. 9.4) ಜನರ ಜೀವ ಬಲಿಯಾಗಿದೆ.
ಇದನ್ನೂ ಓದಿ: US Road Accident | ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ; ಭಾರತ ಮೂಲದ ಮೂವರು ವಿದ್ಯಾರ್ಥಿಗಳ ಸಾವು