ಅಫ್ಘಾನಿಸ್ತಾನದಲ್ಲಿ ಮಂಗಳವಾರ ಉಂಟಾದ ಭೂಕಂಪನ ಅದರ ನೆರೆರಾಷ್ಟ್ರಗಳ ಮೇಲೆ ಕೂಡ ಪ್ರಭಾವ ಬೀರಿದೆ. ಅಫ್ಘಾನಿಸ್ತಾನದ ಜರ್ಮ್ ಎಂಬಲ್ಲಿ ಭೂಮೇಲ್ಮೈ ಆಳದಿಂದ 180 ಕಿಮೀ ಆಳದಲ್ಲಿ ಭೂಮಿ ನಡುಗಿತ್ತು. ಅದರ ಪರಿಣಾಮ ಪಾಕಿಸ್ತಾನ, ತಜಿಕಿಸ್ತಾನ ಮತ್ತು ಭಾರತದ ಕಾಶ್ಮೀರದಲ್ಲೂ ಭೂಮಿ ಕಂಪಿಸಿದೆ (Kashmir Doctors). ಕಾಶ್ಮೀರದಲ್ಲಿ ಕೂಡ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ. ಭೂಮಿ ನಡುಗಿದ ಸಂದರ್ಭದಲ್ಲಿ ಅದೆಷ್ಟೋ ಜನರು ಭಯಭೀತರಾಗಿದ್ದಾರೆ. ಮನೆಯಲ್ಲಿರುವ ವಸ್ತುಗಳೆಲ್ಲ ಗಡಗಡನೆ ನಡುಗಿದಾಗ ಹಲವರು ತಮ್ಮ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಆದರೆ ಈ ಭೂಕಂಪದ ಮಧ್ಯೆಯೂ ಕಾಶ್ಮೀರದ ವೈದ್ಯರು ಗರ್ಭಿಣಿಯೊಬ್ಬರಿಗೆ, ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರಗೆ ತೆಗೆದಿದ್ದು, ಶ್ಲಾಘನೆಗೆ ಪಾತ್ರರಾಗಿದ್ದಾರೆ. ವಿಡಿಯೊ ಕೂಡ ವೈರಲ್ ಆಗಿದೆ.
ಭೂಮಿ ಕಂಪಿಸುತ್ತಿತ್ತು. ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಅಷ್ಟಾದರೂ ಅನಂತ್ನಾಗ್ನ ಬಿಜ್ಬೆಹಾರಾದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯರ ತಂಡ ತಮ್ಮ ಕೆಲಸದಲ್ಲಿ ಮಗ್ನವಾಗಿತ್ತು. ಹೆರಿಗೆ ನೋವು ಪ್ರಾರಂಭವಾಗಿದ್ದ, ತುರ್ತಾಗಿ ಸಿಸೇರಿಯನ್ ಅಗತ್ಯವಿರುವ ಗರ್ಭಿಣಿಗೆ ಆ ವೈದ್ಯರು, ವೈದ್ಯಕೀಯ ಸಿಬ್ಬಂದಿಯೆಲ್ಲ ಸೇರಿ ಹೆರಿಗೆ ಮಾಡಿಸಿದ್ದಾರೆ. ಭೂಮಿ ನಡುಗುತ್ತಿರುವುದು ಆ ವೈದ್ಯರಿಗೂ ಗೊತ್ತಾಗುತ್ತಿತ್ತು. ಆದರೆ ತಮ್ಮ ಕೆಲಸವನ್ನು ಅರ್ಧಕ್ಕೆ ಬಿಡಲಿಲ್ಲ. ಗರ್ಭಿಣಿಗೆ ಸಮಾಧಾನ ಮಾಡುತ್ತ, ಆಕೆಯನ್ನು ಸಂತೈಸುತ್ತ ಅವರು ಹೆರಿಗೆ ಮಾಡಿಸಿದ್ದಾರೆ. ತಮ್ಮ ವೃತ್ತಿಯೆಡೆಗಿನ ಬದ್ಧತೆಯನ್ನು ತೋರಿಸಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಈ ವಿಡಿಯೊವನ್ನು ಮೊದಲು ಶೇರ್ ಮಾಡಿಕೊಂಡಿದ್ದು ಅನಂತ್ನಾಗ್ನ ಮುಖ್ಯ ವೈದ್ಯಕೀಯ ಅಧಿಕಾರಿ. ಆಸ್ಪತ್ರೆ ಥಿಯೇಟರ್ನಲ್ಲಿರುವ ವೈದ್ಯಕೀಯ ಉಪಕರಣಗಳೆಲ್ಲ ಭೂಕಂಪದಿಂದ ಅಲುಗಾಡುವುದನ್ನು ನೋಡಬಹುದು. ಅವರು ಸಿಸೇರಿಯನ್ ಶುರು ಮಾಡಿದಾಗ ಕರೆಂಟ್ ಇತ್ತು. ಆದರೆ ಬಳಿಕ ಅದೂ ಕೂಡ ಕಡಿತಗೊಂಡು, ಕತ್ತಲಾವರಿಸುತ್ತದೆ. ವೈದ್ಯರು ಕೂಡಲೇ ಬೇರೆ ವ್ಯವಸ್ಥೆ ಮಾಡಿಕೊಂಡು ತಮ್ಮ ಕೆಲಸ ಮುಂದುವರಿಸುತ್ತಾರೆ.
ಮಂಗಳವಾರ ರಾತ್ರಿ 11ಗಂಟೆ ಹೊತ್ತಿಗೆ ವಿಡಿಯೊ ಪೋಸ್ಟ್ ಆಗಿದ್ದು, ಈಗಾಗಲೇ 50 ಸಾವಿರಕ್ಕೂ ಹೆಚ್ಚು ವೀವ್ಸ್ ಕಂಡಿದೆ. ವೈದ್ಯರ ತಂಡದ ನಿಷ್ಠೆ, ಅವರ ಟೀಮ್ ವರ್ಕ್ನ್ನು ಜನರು ತುಂಬ ಶ್ಲಾಘಿಸುತ್ತಿದ್ದಾರೆ. ಅವರ ವೃತ್ತಿಪರತೆ ಮತ್ತು ನಿಸ್ವಾರ್ಥಕ್ಕೆ ಒಂದು ಸಲಾಂ ಎನ್ನುತ್ತಿದ್ದಾರೆ. ಹಾಗೇ, ಇನ್ನೂ ಕೆಲವರು, ಅಷ್ಟು ಭೂಕಂಪವಾಗುತ್ತಿದ್ದರೂ, ಧೈರ್ಯಗೆಡದೆ, ಆಗಿದ್ದು ಆಗಲಿ ಎಂದು ಸ್ಟ್ರೆಚರ್ ಮೇಲೆ ಮಲಗಿರುವ ಮಹಿಳೆಯನ್ನೂ ಕೆಲವರು ಹೊಗಳಿದ್ದಾರೆ.