Site icon Vistara News

Kashmir Encounter: ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಸೇನಾ ಕಾರ್ಯಾಚರಣೆ; 6 ಉಗ್ರರ ಹತ್ಯೆ

Kashmir Encounter

Security Forces Eliminate Six Terrorists in Successful Operations in South Kashmir's Kulgam District

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir)ದ ಮತ್ತೆ ಭಾರತೀಯ ಸೇನೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆ(Kashmir Encounter)ಯಲ್ಲಿ ಬರೋಬ್ಬರಿ ಆರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇತ್ತೀಚೆಗೆ ಹಿಂದು ಯಾತ್ರಿಕರು, ವಲಸಿಗ ಕಾರ್ಮಿಕರು ಹಾಗೂ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು (Indian Army) ಸರಿಯಾಗಿಯೇ ತಿರುಗೇಟು ನೀಡುತ್ತಿದೆ. ಉಗ್ರರ ನಿರ್ನಾಮಕ್ಕಾಗಿ ಸಾಲು ಸಾಲು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಕುಲ್ಗಾಮ್‌ ಮತ್ತು ಶೋಪಿಯಾನ್‌ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆರು ಉಗ್ರರ ಹುಟ್ಟಡಗಿಸಲಾಗಿದೆ.

ಉಗ್ರರು ಕುಲ್ಗಾಮ್‌ನ ಚಿನ್ನಿಗಾಮ್‌ ಮತ್ತು ಮದರ್‌ಗಾಮ್‌ ಗ್ರಾಮಗಳಲ್ಲಿ ನಿರ್ಮಿಸಲಾಗಿದ್ದ ಅಡಗುತಾಣಗಳಲ್ಲಿ ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಉಗ್ರರನ್ನು ಹತ್ಯೆಗೈಯಲಾಗಿತ್ತು. ಚಿನ್ನಿಗಾಮ್‌ನಲ್ಲಿ Ak 47 ಬಂದೂರುಗಳು, ಸುಧಾರಿತ ಸ್ಫೋಟಕಗಳನ್ನು(IED) ವಶಕ್ಕೆ ಪಡೆಯಲಾಗಿದೆ. ಈ ಆರು ಉಗ್ರರು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

ಮೂರು ದಿನಗಳ ಹಿಂದೆಯೂ ಕುಲ್ಗಾಮ್‌ ಜಿಲ್ಲೆಯ ಫ್ರೈಸಲ್‌ ಚಿನ್ನಿಗಮ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದರು. ಕಾರ್ಯಾಚರಣೆ ಕೈಗೊಳ್ಳುತ್ತಲೇ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಆಗ ಮುನ್ನಡೆ ಸಾಧಿಸಿದ ಭದ್ರತಾ ಸಿಬ್ಬಂದಿಯು ನಾಲ್ವರು ಉಗ್ರರನ್ನು ಹತ್ಯೆಗೈದಿದ್ದಾರೆ. ನಾಲ್ವರೂ ಉಗ್ರರು ಯಾವ ಉಗ್ರ ಸಂಘಟನೆಯವರು ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಶನಿವಾರ (ಜುಲೈ 6) ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ಕೈಗೊಂಡ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ.

ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನು ಜೂನ್‌ 26ರಂದು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದರು. ಇತ್ತೀಚೆಗೆ ಕಣಿವೆಯಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಅಲ್ಲದೆ, ಉಗ್ರರನ್ನು ನಿರ್ಮೂಲನೆ ಮಾಡಲು ಸೂಚನೆ ನೀಡಿದ್ದರು. ಅದರಂತೆ, ಯೋಧರು ಸತತ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 11, 12ರಂದು ಚಟ್ಟರ್ಗಲ್ಲಾ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಇದಕ್ಕೆ ಸೇನೆ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದು, ಈಗಾಗಲೆ 7-8 ಭಯೋತ್ಪಾದಕರು ಸತ್ತಿದ್ದಾರೆ. ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ ಆರೋಪದ ಮೇಲೆ ಮೂವರು ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.

ಇದನ್ನೂ ಓದಿ:PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

Exit mobile version