Site icon Vistara News

Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Kathua Terror Attack

Kathua Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಜೂನ್‌ 9ರಂದು ರಿಯಾಸಿ ಜಿಲ್ಲೆಯಲ್ಲಿ ಬಸ್‌ನ ಮೇಲೆ ನಡೆದ ಭಯೋತ್ಪಾದಕ ದಾಳಿಗೆ 9 ಮಂದಿ ಬಲಿಯಾಗಿದ್ದಾರೆ. ಅದಾದ ಬಳಿಕ ಮಂಗಳವಾರ (ಜೂನ್‌ 11) ರಾತ್ರಿ ಕಥುವಾದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಗೆ ಸೇರಿದ ಜವಾನರೊಬ್ಬರು ಮೃತಪಟ್ಟಿದ್ದಾರೆ. ನಂತರ ಸೇಡು ತೀರಿಸಿಕೊಂಡ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ (Kathua Terror Attack).

ಕಥುವಾ ಜಿಲ್ಲೆಯ ಸೈದಾ ಸುಖಲ್ ಗ್ರಾಮದಲ್ಲಿ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಡಗಿದ್ದ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಸಿಆರ್‌ಪಿಎಫ್‌ ಸಿಬ್ಬಂದಿಯೊಬ್ಬರು ಹತರಾಗಿದ್ದರು. ಬಳಿಕ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

ಜಮ್ಮುವಿನಿಂದ 60 ಕಿ.ಮೀ ದೂರದಲ್ಲಿರುವ, ಅಂತಾರಾಷ್ಟ್ರೀಯ ಗಡಿ ಬಳಿಯ ಗ್ರಾಮದಲ್ಲಿ ಮಂಗಳವಾರ ಸಂಜೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಓರ್ವ ನಾಗರಿಕ ಗಾಯಗೊಂಡಿದ್ದ. ನಂತರ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಒಬ್ಬ ಭಯೋತ್ಪಾದಕನನ್ನು ಕೊಂದಿದೆ. ಇನ್ನೊಬ್ಬನನ್ನು ಬುಧವಾರ ಮುಂಜಾನೆ ಗುಂಡಿಕ್ಕಿ ಕೊಲ್ಲಲಾಯಿತು. ಸದ್ಯ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಭಯೋತ್ಪಾದಕರು ಗಡಿಯಾಚೆಯಿಂದ ಒಳನುಸುಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ADGP) ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಪ್ರದೇಶವನ್ನು ಸುತ್ತುವರಿದು ಸಿಆರ್‌ಪಿಎಫ್‌ ಸಹಾಯದಿಂದ ಮನೆ-ಮನೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಥುವಾದ ಸೈದಾ ಸುಖಲ್ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಎಡಿಜಿಪಿ (ಜಮ್ಮು ವಲಯ) ಆನಂದ್ ಜೈನ್, “ಗಡಿಯಾಚೆಯಿಂದ ಹೊಸದಾಗಿ ಒಳ ನುಸುಳಿದ್ದ ಇಬ್ಬರು ಭಯೋತ್ಪಾದಕರು ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಗ್ರಾಮಕ್ಕೆ ಬಂದು ಮನೆಯೊಂದರಿಂದ ನೀರು ಕೇಳಿದ್ದರು. ಇದರಿಂದ ಭಯಭೀತರಾಗಿದ್ದ ಸ್ಥಳೀಯರು ಮಾಹಿತಿ ಒದಗಿಸಿದ್ದರು. ಕೂಡಲೇ ಪೊಲೀಸ್ ತಂಡವು ಗ್ರಾಮಕ್ಕೆ ಧಾವಿಸಿತುʼʼ ಎಂದು ವಿವರಿಸಿದ್ದಾರೆ.

“ಒಳ ನುಸುಳಿದ್ದ ಭಯೋತ್ಪಾದಕರ ಪೈಕಿ ಓರ್ವ ಪೊಲೀಸ್ ತಂಡದ ಮೇಲೆ ಗ್ರೆನೇಡ್ ಎಸೆಯಲು ಪ್ರಯತ್ನಿಸಿದ್ದ. ಈ ವೇಳೆ ಪ್ರತಿದಾಳಿ ನಡೆಸಿ ಪೊಲೀಸರು ಆತನನ್ನು ಹೊಡೆದುರುಳಿಸಿದ್ದಾರೆ. ಇನ್ನೊಬ್ಬ ಉಗ್ರ ಬುಧವಾರ ಹತನಾಗಿದ್ದಾನೆ. ಹತ್ಯೆಗೀಡಾದ ಭಯೋತ್ಪಾದಕನಿಂದ ಅಸಾಲ್ಟ್ ರೈಫಲ್ ಮತ್ತು ರಕ್ಸಾಕ್ ಅನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಆನಂದ್ ಜೈನ್ ತಿಳಿಸಿದ್ದಾರೆ.

ಶಿವ ಖೋರಿ ದೇವಸ್ಥಾನದಿಂದ ಕತ್ರಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಎರಡನೇ ದಿನದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ದೋಡಾದಲ್ಲಿನ ಸೇನಾ ನೆಲೆಯ ಮೇಲೆಯೂ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಐವರು ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: Reasi Terror Attack: ರಿಯಾಸಿ ಭಯೋತ್ಪಾದಕ ದಾಳಿಯ ಶಂಕಿತನ ರೇಖಾಚಿತ್ರ ಬಿಡುಗಡೆ; ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಘೋಷಣೆ

Exit mobile version