ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi Liquor Policy scam) ಸಂಬಂಧಿಸಿದಂತೆ, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಪುತ್ರಿ ಕವಿತಾ (Kavitha) ಅವರ ಮಾಜಿ ಚಾರ್ಟರ್ಡ್ ಅಕೌಂಟಂಟ್(CA) ಒಬ್ಬರನ್ನು ಸಿಬಿಐ ಬಂಧಿಸಿದೆ. ಬಂಧಿತ ವ್ಯಕ್ತಿ ಹೈದ್ರಾಬಾದ್ ಮೂಲದವರಾಗಿದ್ದಾರೆ. ಎಂಎಲ್ಸಿಯೂ ಆಗಿರುವ ಕೆಸಿಆರ್ ಪುತ್ರಿ ಕವಿತಾ ಅವರಿಗೆ ಬಂಧಿತ ವ್ಯಕ್ತಿ ಆಡಿಟರ್ ಆಗಿ ಕೆಲಸ ಮಾಡಿದ್ದರು.
ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು(CBI) ಚಾರ್ಟರ್ಡ್ ಅಕೌಂಟಂಟ್ ಬುಚ್ಚಿಬಾಬು ಗೋರಂಟ್ಲಾ ಅವರನ್ನು ವಿಚಾರಣೆಗಾಗಿ ದೆಹಲಿಗೆ ಕರೆಸಿತ್ತು. ಅವರು ಸಹಕಾರ ನೀಡದ ಕಾರಣ ಮಂಗಳವಾರ ಸಂಜೆ ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಅವರು ನೀಡಿದ ಪ್ರತಿಕ್ರಿಯೆಗಳು ತಪ್ಪಿನಿಂದ ತಪ್ಪಿಸಿಕೊಳ್ಳುವಂತಿವೆ ಎಂದು ಸಿಬಿಐ ಹೇಳಿಕೊಂಡಿದೆ.
ಇದನ್ನೂ ಓದಿ: Delhi School Scam | ಅಬಕಾರಿ ಪ್ರಕರಣದ ಬೆನ್ನಲ್ಲೇ ದಿಲ್ಲಿಯಲ್ಲಿ ಮತ್ತೊಂದು ಹಗರಣ ಸದ್ದು, ಏನಿದು ಕೇಸ್?
ಈಗ ರದ್ದಾಗಿರುವ ದಿಲ್ಲಿ ಅಬಕಾರಿ ನೀತಿ 2021-2 ರ ರಚನೆ ಮತ್ತು ಅನುಷ್ಠಾನದಲ್ಲಿ ಗೋರಂಟ್ಲಾ ಅವರ ಪಾತ್ರ ವಹಿಸಿದ್ದಾರೆ. ಆ ಮೂಲಕ ಹೈದರಾಬಾದ್ ಮೂಲದ ಸಗಟು ಮತ್ತು ಚಿಲ್ಲರೆ ಪರವಾನಗಿದಾರರು, ಅವರ ಮಾಲೀಕರಿಗೆ ಲಾಭದಾಯಕವಾಗುವ ರೀತಿಯಲ್ಲಿ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆಂದು ಸಿಬಿಐ ಹೇಳಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಸಿಆರ್ ಪುತ್ರಿ ಕವಿತಾ ಅವರನ್ನು ಸಿಬಿಐ ಕಳೆದ ಡಿಸೆಂಬರ್‌ನಲ್ಲಿ ಪ್ರಶ್ನಿಸಿತ್ತು.