ನಿಜಮಾಬಾದ್: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣ (Telangana Assembly Election) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (CM KCR) ಅವರು 2020ರ ಡಿಸೆಂಬರ್‌ನಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ (NDA) ಸೇರುವ ಮನವಿ ಮಾಡಿಕೊಂಡಿದ್ದರು. ಆದರೆ, ನಾನು ಅವರ ಮನವಿಯನ್ನು ತಿರಸ್ಕರಿಸಿದೆ. ಎನ್‌ಡಿಎಗೆ ಬಿಆರ್‌ಎಸ್ (BRS) ಸೇರಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಈ ಮಧ್ಯೆ, ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಸಿಆರ್ ಅವರ ಪುತ್ರರೂ ಆಗಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್ (KT Rama Rao) ಅವರು, ಎನ್‌ಡಿಎ ಸೇರಲು ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ (Mad Dog) ಎಂದು ತಿರುಗೇಟು ನೀಡಿದ್ದಾರೆ.
ನಿಜಮಾಬಾದ್‌ನ ಗಿರಿರಾಜ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇವತ್ತು ಮಹತ್ವದ ರಹಸ್ಯವೊಂದನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು. 2020ರ ಡಿಸೆಂಬರ್ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು ಮತ್ತು ಯಾವುದೇ ಪಕ್ಷವು ನಿಗಮವನ್ನು ವಶಪಡಿಸಿಕೊಳ್ಳಲು ಸಂಪೂರ್ಣ ಬಹುಮತವನ್ನು ಪಡೆದಿದಿರಲಿಲ್ಲ. ಆಗ ಚುನಾವಣೆ ಮುಗಿದ ಕೂಡಲೇ ಕೆಸಿಆರ್ ನಮ್ಮ ಬೆಂಬಲ ಪಡೆಯಲು ದೆಹಲಿಗೆ ಬಂದಿದ್ದರು ಎಂದು ಹೇಳಿದರು.
ಕೆಸಿಆರ್ ಅವರ ನನಗೆ ಹೂಗುಚ್ಛಗಳನ್ನು ಮತ್ತು ಶಾಲುಗಳನ್ನು ನೀಡಿ ಅಭಿನಂದಿಸಿದರು. ಅವರು ನನ್ನ ಮೇಲೆ ತುಂಬಾ ಪ್ರೀತಿಯನ್ನು ತೋರಿಸಿದರು, ವಾಸ್ತವದಲ್ಲಿ ಅದು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ನಡವಳಿಕೆಯಾಗಿತ್ತು. ನನ್ನ ನಾಯಕತ್ವದಲ್ಲಿ ದೇಶವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು. ನಂತರ, ಅವರ ಪಕ್ಷವೂ(ಬಿಆರ್‌ಎಸ್) ಎನ್‌ಡಿಎ ಭಾಗವಾಗಲು ಬಯಸಿದೆ ಎಂದು ಹೇಳಿದರು. ”ಸರ್, ದಯವಿಟ್ಟು ನಮ್ಮನ್ನು ಎನ್‌ಡಿಎಗೆ ತೆಗೆದುಕೊಳ್ಳಿ ಅಂದ್ರು. ನನಗೆ ಆಶ್ಚರ್ಯವಾಯಿತು ಮತ್ತು ಕಾರಣವನ್ನು ಕೇಳಿದೆ. ಜಿಎಚ್‌ಎಂಸಿಯಲ್ಲಿ ಬಿಜೆಪಿಯ ಬೆಂಬಲವನ್ನು ಬಯಸುವುದಾಗಿ ಅವರು ಹೇಳಿದರು” ಪ್ರಧಾನಿ ತಿಳಿಸಿದ್ದಾರೆ.
ಆದರೆ, ನಾನು ಕೆಸಿಆರ್ ಅವರ ಮನವಿಯನ್ನು ತಿರಸ್ಕರಿಸಿದೆ. ಭಾರತೀಯ ಜನತಾ ಪಾರ್ಟಿ ಎಂದಿಗೂ ಬಿಆರ್‌ಎಸ್‌ನೊಂದಿಗೆ ಕೈ ಜೋಡಿಸುವುದಿಲ್ಲ. ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದರಲ್ಲಿ ಹಿಂಜರಿಕೆ ಇಲ್ಲ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಕಿರುಕುಳವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ತೆಲಂಗಾಣ ಜನರಿಗೆ ಮೋಸ ಮಾಡುವುದಿಲ್ಲ. ಆ 48 ಸ್ಥಾನಗಳೊಂದಿಗೆ ನಾವು ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ. ಬಿಆರ್‌ಎಸ್‌ಗೆ ಎನ್‌ಡಿಎಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಮತ್ತು ನಾವು ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!
ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ; ಕೆಟಿಆರ್
ಬಿಆರ್‌ಎಸ್ ಎನ್‌ಡಿಎ ಭಾಗವಾಗಲು ಮುಂದಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು, ಎನ್‌ಡಿಎ ಸೇರಲು ನಮಗೇನು ಹಚ್ಚು ನಾಯಿ ಕಚ್ಚಿದೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಅತಿ ದೊಡ್ಡ ಸುಳ್ಳಿನ ಪಕ್ಷ ಎಂದು ಹೇಳಿದ ಕೆಟಿಆರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾಟ್ಸಾಪ್ ವಿಶ್ವವಿದ್ಯಾಲಯ ಕುಲಪತಿಯಾಗಿದ್ದಾರೆ. ಪ್ರಧಾನಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರದಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಹಣ ನೀಡಿತ್ತು ಎಂದು ಹೇಳಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿದ ಕೆಟಿಆರ್ ಅವರು, ಆ ಹೇಳಿಕೆಯಂತೆ ಕೆಸಿಆರ್ ಅವರು ಎನ್‌ಡಿಎ ಸೇರಲು ಮುಂದಾಗಿದ್ದರು ಎಂಬುದು ಸಂಪೂರ್ಣ ಸುಳ್ಳು ಎಂದು ಹೇಳಿದರು.