ಮುಂಬೈ: ದೌರ್ಜನ್ಯ ಎಸಗಿದವರ ವಿರುದ್ಧ ಹಲವು ವರ್ಷಗಳ ಹೋರಾಡಿ ಗೆಲ್ಲುವುದು, ಮುನ್ನಡೆ ಸಾಧಿಸುವುದು, ಅನ್ಯಾಯ ಮಾಡಿದವರನ್ನು ಮಟ್ಟಹಾಕುವುದೆಲ್ಲ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನೋಡಲು ಸಾಧ್ಯವಾಗುತ್ತದೆ. ಆದರೆ, ಮಹಾರಾಷ್ಟ್ರದಲ್ಲಿ ಶೇನ್ ಸ್ಯಾಂಟೋಸ್ ಎಂಬ ಯುವಕನೊಬ್ಬ ತನ್ನ ಅಣ್ಣ ಹಾಗೂ ಗೆಳೆಯನನ್ನು ಕೊಂದವರ ವಿರುದ್ಧ 12 ವರ್ಷಗಳಿಂದ ಹೋರಾಡಿ ಈಗ ಮುನ್ನಡೆ ಸಾಧಿಸಿದ್ದಾರೆ.
2011ರಲ್ಲಿ ಮುಂಬೈನ ಅಂಧೇರಿಯಲ್ಲಿರುವ ಅಂಬೋಲಿ ಬಾರ್ ಆ್ಯಂಡ್ ಕಿಚನ್ ರೆಸ್ಟೋರೆಂಟ್‌ನಲ್ಲಿ ಕೀನನ್ (24), ರುಬೆನ್ ಸೇರಿ ಅವರ ಗೆಳೆಯರು ಪಾರ್ಟಿ ಮಾಡಿ ಮನೆಗೆ ಹೊರಡುವಾಗ ಒಂದಷ್ಟು ಜನ ಅವರಿಗೆ ಕಿಚಾಯಿಸುತ್ತಾರೆ. ಆಗ ವಾಗ್ವಾದವು ಗಲಾಟೆಯಾಗಿ ಪರಿಣಮಿಸುತ್ತದೆ. ಜಿತೇಂದ್ರ ರಾಣಾ, ಸತೀಶ್ ದುಲ್ಗಜ್, ಸುನಿಲ್ ಭೋಟ್ ಸೇರಿ ಹಲವರು ಕಿನನ್, ರುಬೆನ್ ಸೇರಿ ಎಲ್ಲರ ಮೇಲೆ ಹಲ್ಲೆ ನಡೆಸುತ್ತಾರೆ. ಆಗ, ಕೀನನ್ ಸ್ಥಳದಲ್ಲೇ ಮೃತಪಟ್ಟರೆ, ರುಬೆನ್ ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಡುತ್ತಾರೆ. ಆಗ, ಶೇನ್ ಸ್ಯಾಂಟೋಸ್‌ಗೆ 19 ವರ್ಷ.
ಅಣ್ಣ ಹಾಗೂ ಆತನ ಗೆಳೆಯನನ್ನು ಕೊಂದವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ನಿರ್ಧರಿಸಿದ ಶೇನ್ ಸ್ಯಾಂಟೋಸ್, ಕಾನೂನು ಓದಲು ಮುಂದಾಗುತ್ತಾರೆ. ಕಷ್ಟಪಟ್ಟು ಓದಿ 2020ರಲ್ಲಿ ಕಾನೂನು ಪದವಿ ಪಡೆದ ಶೇನ್ ಸ್ಯಾಂಟೋಸ್ ಈಗ ಅಣ್ಣ ಕೀನನ್ ಹಾಗೂ ರುಬೆನ್ ಪರ ವಾದ ಮಂಡಿಸುತ್ತಿದ್ದಾರೆ. ಇಬ್ಬರನ್ನೂ ಹತ್ಯೆಗೈದ ಪ್ರಕರಣದಲ್ಲಿ ಜಿತೇಂದ್ರ ರಾಣಾ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಅವರು ಸಲ್ಲಿಸಿದ ಜಾಮೀನು ಅರ್ಜಿಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Viral Video: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಚಿಕನ್‌ನಲ್ಲಿ ಸಿಕ್ಕಿತು ಸತ್ತ ಇಲಿ; ವಿಡಿಯೊ ವೈರಲ್
ಹೋರಾಟದಲ್ಲಿ ಮುನ್ನಡೆ
ಜಿತೇಂದ್ರ ರಾಣಾ ಸಲ್ಲಿಸಿದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ರಾಣಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಸಂತ್ರಸ್ತರ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಶೇನ್ ಸ್ಯಾಂಟೋಸ್, ಬೇಲ್ ಸಿಗದಂತೆ ಮಾಡಿದ್ದಾನೆ. ಅಷ್ಟೇ ಅಲ್ಲ, ಮುಂದಿನ ವಿಚಾರಣೆಗಳಲ್ಲೂ ಕಾನೂನು ಹೋರಾಟ ಮುಂದುವರಿಸಿ, ಹತ್ಯೆಯ ಅಪರಾಧಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವುದು ಶೇನ್ ಸ್ಯಾಂಟೋಸ್ ಗುರಿಯಾಗಿದೆ.