Site icon Vistara News

Prashant Kishor: ಜೂನ್‌ 4ರಂದು ಪ್ರತಿಪಕ್ಷಗಳು ನೀರು ಕುಡಿಯಲಿವೆ; ಪ್ರಶಾಂತ್‌ ಕಿಶೋರ್‌ ಮಾತಿನ ಮರ್ಮವೇನು?

Prashant Kishor

Keep Plenty of Water Handy on June 4: Prashant Kishor Reacts to Row Over 2024 Seat Prediction

ನವದೆಹಲಿ: ಚುನಾವಣಾ ರಣತಂತ್ರಗಾರ, ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ (Prashant Kishor) ಅವರು ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದ ಬಗ್ಗೆ ಮಾತನಾಡಿರುವ, ಸಂದರ್ಶನದಲ್ಲಿ ಉಲ್ಲೇಖಿಸಿರುವ ಅಂಶಗಳು ದೇಶಾದ್ಯಂತ ಚರ್ಚೆಯಾಗುತ್ತಿವೆ. ನರೇಂದ್ರ ಮೋದಿ (Narendra Modi) ಅವರ ವರ್ಚಸ್ಸು ಕಡಿಮೆಯಾದರೂ ಬಿಜೆಪಿ ಬಹುಮತ ಸಾಬೀತುಪಡಿಸಲಿದೆ ಎಂಬುದಾಗಿ ವಿಶ್ಲೇಷಿಸಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಪ್ರಶಾಂತ್‌ ಕಿಶೋರ್‌ ಪ್ರತಿಪಾದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಶಾಂತ್‌ ಕಿಶೋರ್‌ ಅವರು ಪ್ರತಿಪಕ್ಷಗಳಿಗೆ, ಟೀಕಾಕಾರರಿಗೆ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. “ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಜೂನ್‌ 4ರಂದು ಪಕ್ಕದಲ್ಲಿ ನೀರು ಇಟ್ಟುಕೊಂಡಿರಿ” ಎಂದು ಪೋಸ್ಟ್‌ ಮಾಡಿದ್ದಾರೆ.

“ಹೆಚ್ಚಿನ ಪ್ರಮಾಣದ ನೀರು ಕುಡಿಯುವುದರಿಂದ ದೇಹ ಹಾಗೂ ಮನಸ್ಸು ನಿರ್ಜಲೀಕರಣಗೊಳ್ಳುತ್ತದೆ. ನಾನು ನೀಡಿರುವ ಸಮೀಕ್ಷಾ ವರದಿಯ ಕುರಿತು ಗಾಬರಿಗೊಂಡವರು ಜೂನ್‌ 4ರಂದು ಹೆಚ್ಚಿನ ಪ್ರಮಾಣದ ನೀರನ್ನು ಪಕ್ಕದಲ್ಲೇ ಇಟ್ಟುಕೊಳ್ಳುವುದು ತುಂಬ ಒಳಿತು” ಎಂಬುದಾಗಿ ಪ್ರಶಾಂತ್‌ ಕಿಶೋರ್‌ ಅವರು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, 2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ಪ್ರಶಾಂತ್‌ ಕಿಶೋರ್‌ ಲೆಕ್ಕಾಚಾರ ನಿಖರವಾಗಿತ್ತು ಎಂಬುದನ್ನು ಕೂಡ ಅವರು ನೆನಪಿಸಿದ್ದಾರೆ.

ಪ್ರಶಾಂತ್‌ ಕಿಶೋರ್‌ ಹೇಳಿದ್ದೇನು?

ಕೆಲ ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಪ್ರಶಾಂತ್‌ ಕಿಶೋರ್‌ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. “ದೇಶದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾದರೂ ಜನಕ್ಕೆ ಅವರ ಮೇಲೆ ಸಿಟ್ಟಿಲ್ಲ. ಹಾಗಾಗಿ, ಬಿಜೆಪಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ” ಎಂದಿದ್ದರು. ಹಾಗೆಯೇ, ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದರು. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್‌ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವಿನ ನಿರ್ಣಾಯಕ ತಿಂಗಳುಗಳು ವ್ಯರ್ಥವಾಗಿದೆ. ಇದು ʼಇಂಡಿಯಾʼ ಬಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಒತ್ತಿ ಹೇಳಿದ್ದರು. ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಮತ್ತು ಜನವರಿಯಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಮಲ ಪಡೆಯ ಗೆಲುವಿಗೆ ಇನ್ನಷ್ಟು ಶಕ್ತಿ ನೀಡಲಿದೆ ಎಂದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.

ಇದನ್ನೂ ಓದಿ: Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Exit mobile version