Site icon Vistara News

Foreign Secretary: ಕೇರಳಕ್ಕಾಗಿ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ

Foreign Secretary

Kerala appoints Vasuki As foreign secretary; BJP calls out CM Pinarayi Vijayan for blatant overreach

ತಿರುವನಂತಪುರಂ: ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಾರ್ಯದರ್ಶಿ ಇದ್ದಾರೆ. ಭಾರತ ಸೇರಿ ಹಲವು ದೇಶಗಳಲ್ಲಿ ವಿದೇಶಾಂಗ ಕಾರ್ಯದರ್ಶಿ (Foreign Secretary) ಇರುತ್ತಾರೆ. ಭಾರತದಲ್ಲಿ ಯಾವ ರಾಜ್ಯದಲ್ಲೂ ವಿದೇಶಾಂಗ ಕಾರ್ಯದರ್ಶಿ ಎಂಬ ಹುದ್ದೆ ಇಲ್ಲ. ಆದರೆ, ಕೇರಳದ ಪಿಣರಾಯಿ ವಿಜಯನ್‌ (Pinarayi Vijayan) ನೇತೃತ್ವದ ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿ ಕೆ. ವಾಸುಕಿ (IAS Officer K. Vasuki) ಅವರನ್ನು ”ಕೇರಳದ ವಿದೇಶಾಂಗ ಕಾರ್ಯದರ್ಶಿ” ಎಂಬುದಾಗಿ ನೇಮಕ ಮಾಡಿದೆ. ಇದು ಈಗ ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.

ಕೆ. ವಾಸುಕಿ ಅವರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. “ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕೇರಳಕ್ಕೆ ಸಂಬಂಧಿಸಿದ ವಿದೇಶಾಂಗ ಚಟುವಟಿಕೆಗಳ ಕುರಿತು ಇವರು ಕಾರ್ಯನಿರ್ವಹಿಸಲಿದ್ದಾರೆ. ದೆಹಲಿಯಲ್ಲಿರುವ ಕೇರಳ ಹೌಸ್‌ ಸ್ಥಾನಿಕ ಕಮಿಷನರ್‌ ಅವರು ವಾಸುಕಿ ಅವರಿಗೆ ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ವಿದೇಶದಲ್ಲಿರುವ ರಾಯಭಾರ ಕಚೇರಿಗಳು, ರಾಜತಾಂತ್ರಿಕ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಲು ನೆರವಾಗಲಿದ್ದಾರೆ” ಎಂದು ಜುಲೈ 15ರಂದೇ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಆಕ್ರೋಶ

ರಾಜ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇರಳ ಬಿಜೆಪಿ ಘಟಕವು ಖಂಡಿಸಿದೆ. “ರಾಜ್ಯದಲ್ಲಿ ಐಎಎಸ್‌ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಅಧಿಕಾರದ ಆಕ್ರಮಣ ಮಾಡಿದ್ದಾರೆ. ಅಷ್ಟೇ ಅಲ್ಲ, ಭಾರತ ಸಂವಿಧಾನದಲ್ಲಿ ಕೇಂದ್ರ ಪಟ್ಟಿಗೆ ನೀಡಿರುವುದನ್ನು ಅವರು ಉಲ್ಲಂಘಿಸಿದ್ದಾರೆ. ವಿದೇಶಾಂಗ ಸಚಿವಾಲಯದಲ್ಲಿ ಮಧ್ಯಪ್ರವೇಶಿಸಲು ಕೇರಳಕ್ಕೆ ಯಾವುದೇ ಅಧಿಕಾರ ಇಲ್ಲ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಶಿ ತರೂರ್‌ ಹೇಳಿದ್ದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ, ತಿರುವನಂತಪುರಂ ಸಂಸದ ಶಶಿ ತರೂರ್‌ ಅವರು ಪ್ರತಿಕ್ರಿಯಿಸಿದ್ದಾರೆ. “ವಿದೇಶಾಂಗ ವ್ಯವಹಾರಗಳನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ ಹಾಗೂ ಯಾವುದೇ ರಾಜ್ಯ ಸರ್ಕಾರಕ್ಕೆ ಇದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕುಗಳಿಲ್ಲ. ಆದರೆ, ರಾಜ್ಯ ಸರ್ಕಾರವು ವಿದೇಶದಲ್ಲಿರುವ ತನ್ನ ರಾಜ್ಯದ ನಾಗರಿಕರ ರಕ್ಷಣೆಗೆ ಕಾಳಜಿ ತೋರಬಹುದಾಗಿದೆ. ಹಾಗೆಯೇ, ಕೆ. ವಾಸುಕಿ ಅವರು ಸ್ವತಂತ್ರವಾಗಿ ಯಾವುದೇ ದೇಶದ ಜತೆ ಕಾರ್ಯನಿರ್ವಹಿಸುವ ಅಧಿಕಾರ ಹೊಂದಿಲ್ಲ. ಭಾರತ ಸರ್ಕಾರದ ಅಂಗಸಂಸ್ಥೆಗಳ ಮೂಲಕವೇ ಅವರು ನಿರ್ವಹಿಸಿದ್ದಾರೆ” ಎಂದು ರಾಜ್ಯದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಸ್ತುತ, ವಿಕ್ರಮ್‌ ಮಿಸ್ರಿ ಅವರು ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: Kerala Gold Smuggling Case: ನಾನು ಸುಮ್ಮನಿರಲು 30 ಕೋಟಿ ರೂ. ಆಫರ್‌; ಪಿಣರಾಯಿ ವಿರುದ್ಧ ಸ್ವಪ್ನಾ ಆರೋಪ

Exit mobile version