Site icon Vistara News

Uniform Civil Code: ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ನಿರ್ಣಯ ಅಂಗೀಕರಿಸಿದ ಕೇರಳ ರಾಜ್ಯ ವಿಧಾನಸಭೆ

Kerala Assembly

ನವದೆಹಲಿ: ಏಕರೂಪ ನಾಗರಿಕ ಸಂಹಿತೆ(Uniform Civil Code – UCC) ಜಾರಿಗೆ ವಿರೋಧಿಸಿ ಕೇರಳ ವಿಧಾಸನಭೆಯು (Kerala Assembly) ಅವಿರೋಧವಾಗಿ ನಿರ್ಣಯವನ್ನು (Resolution) ಕೈಗೊಂಡಿದೆ. ಯಾವುದೇ ಸಂವಾದ, ಒಪ್ಪಿಗಳಿಲ್ಲದೇ ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಯು ನಮ್ಮ ಸಂವಿಧಾನದ (Constitution of India) ಜಾತ್ಯಾತೀತ ಸ್ವರೂಪಕ್ಕೆ ಧಕ್ಕೆ ತರಲಿದೆ ಎಂದು ಕೇರಳ ವಿಧಾನಸಭೆಯು ಅಭಿಪ್ರಾಯಪಟ್ಟಿದೆ. ಯುಸಿಸಿ ವಿರೋಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (kerala cm pinarayi vijayan) ಅವರು ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯಕ್ಕೆ ಎಡ ಪ್ರಜಾಸತ್ತಾತ್ಮಕ ವೇದಿಕೆ (LDF) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ವೇದಿಕೆ (UDF)ನ ಸದಸ್ಯರು ಒಕ್ಕೂರಲ ಬೆಂಬಲ ನೀಡಿದರು. ಯುಸಿಸಿ ಪರವಾಗಿರುವ ಬಿಜೆಪಿಯ ಯಾವುದೇ ಸದಸ್ಯರು ಕೇರಳ ವಿಧಾನಸಭೆಯಲ್ಲಿ ಇಲ್ಲ.

ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ನಿರ್ಣಯ ಕೈಗೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕೇರಳ ಪಾತ್ರವಾಗಿದೆ. ಸಂವಿಧಾನದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕಲ್ಪನೆಯು ಸಂಘ ಪರಿವಾರದ ಯುಸಿಸಿಯ ಆವೃತ್ತಿಯಂತೆಯೇ ಅಲ್ಲ. ಅವರ ಕಾನೂನಿನ ಕಲ್ಪನೆಯು ಮನುಸ್ಮೃತಿಯಂತೆಯೇ ಇದೆ. ಅವರು ಅದನ್ನು ಮೊದಲೇ ಸ್ಪಷ್ಟಪಡಿಸಿದ್ದರು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ನಿರ್ಣಯವನ್ನು ಮಂಡಿಸಿ ಹೇಳಿದರು.

ಯುಸಿಸಿ ಬಗ್ಗೆ ಸಾಕಷ್ಟು ಸದ್ದುಗಳಾಗುತ್ತಿದ್ದರೂ, ಉದ್ದೇಶಿತ ಕಾನೂನಿನ ಕರಡನ್ನು ಈವರೆಗೆ ಪ್ರಸ್ತಾಪಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ ಉತ್ತರಾಖಂಡ ಸರ್ಕಾರ ರಚಿಸಿದ ತಜ್ಞರ ಸಮಿತಿಯು ರಾಜ್ಯ ಸರ್ಕಾರದ ಮುಂದೆ ಕರಡು ಪ್ರತಿ ಮಂಡಿಸಲು ಸಾಧ್ಯವಿಲ್ಲ. ಇನ್ನು ಹದಿನೈದು ದಿನದಲ್ಲಿ ಕರಡು ಸಿದ್ಧವಾಗಲಿದೆ ಎಂದು ಹೇಳಿ ಸುಮಾರು ದಿನಗಳಾದರೂ ಕರಡು ರಚಿಸಲು ಸಾಧ್ಯವಾಗಿಲ್ಲ ಎಂಬ ಸಂಗತಿಯೂ ಗಮನ ಸೆಳೆದಿದೆ.

ಉದ್ದೇಶಿತ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಸಂಬಂಧ ಕೇಂದ್ರ ಕಾನೂನು ಆಯೋಗವು ಸಲಹೆಗಳಿಗೆ ಆಹ್ವಾನಿಸಿತ್ತು. ಈ ಸಲಹೆಗಳನ್ನು ಸಲ್ಲಿಸಲು ಜುಲೈ 28 ಕೊನೆಯ ದಿನವಾಗಿತ್ತು. ಮೂಲಗಳ ಪ್ರಕಾರ ಆಯೋಗವು 3 ಲಕ್ಷಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆಗೆ 75 ಲಕ್ಷ ಜನ ಪ್ರತಿಕ್ರಿಯೆ, ಜಾರಿ ಬಗ್ಗೆ ಅಂತಿಮ ತೀರ್ಮಾನ ಯಾವಾಗ?

ವಿವಿಧ ಧಾರ್ಮಿಕ ಗುಂಪುಗಳೊಂದಿಗೆ ಚರ್ಚೆಯ ಮೂಲಕ ನಮ್ಮ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಒಮ್ಮತಕ್ಕೆ ಬರುವವರೆಗೆ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತಾದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬಾರದು ಎಂದು ಕೇರಳ ವಿಧಾನಸಭೆಯು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version