Site icon Vistara News

Kerala Boat Tragedy: ಕೇರಳ ಬೋಟ್‌ ದುರಂತ: ಮೃತರ ಸಂಖ್ಯೆ 22ಕ್ಕೆ ಏರಿಕೆ, ಪ್ರಧಾನಿ 2 ಲಕ್ಷ ರೂ. ಪರಿಹಾರ ಘೋಷಣೆ

kerala boat tragedy

ಕೊಚ್ಚಿ: ಮಲಪ್ಪುರಂನಲ್ಲಿ ಬೋಟ್‌ ಮುಳುಗಿದ (Kerala Boat Tragedy) ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ತನೂರ್ ಕರಾವಳಿ ಬಳಿ ಭಾನುವಾರ ರಾತ್ರಿ ಪ್ರವಾಸಿ ದೋಣಿಯೊಂದು ಮಗುಚಿ ಬಿದ್ದು ದುರಂತ ಸಂಭವಿಸಿತ್ತು.

“ಇದುವರೆಗೆ ನಾವು 22 ಮೃತದೇಹಗಳನ್ನು ಹೊರತೆಗೆದಿದ್ದೇವೆ. ದೋಣಿಯಲ್ಲಿ ಎಷ್ಟು ಜನರು ಇದ್ದರು ಎಂಬುದು ನಿಖರವಾಗಿ ತಿಳಿದಿಲ್ಲ. ಆದ್ದರಿಂದ ನಾವು ಹುಡುಕಾಟ ಮುಂದುವರಿಸಿದ್ದೇವೆ. ಇನ್ನಷ್ಟು ಬಲಿಪಶುಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದುʼʼ ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಶಿಜು ತಿಳಿಸಿದರು. ಹಲವಾರು ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಾನೂರ್ ತುವಾಲ್ ಬೀಚ್​ ಬಳಿ ಪ್ರವಾಸಿಗರಿದ್ದ ದೋಣಿ ಅತಿ ಭಾರದಿಂದಾಗಿ ಮುಳುಗಿತ್ತು. ದೋಣಿಯಲ್ಲಿ 40ಕ್ಕೂ ಅಧಿಕ ಪ್ರವಾಸಿಗರಿದ್ದರು ಎಂದು ನಂಬಲಾಗಿದೆ. ಸಂಜೆ ಏಳು ಗಂಟೆಯ ವೇಳೆಗೆ ಮುಳುಗಿದೆ. ನೀರಿನಲ್ಲಿ ಮುಳುಗಿ ಮೃತರಾದವಲ್ಲಿ ನಾಲ್ಕು ಮಕ್ಕಳೂ ಸೇರಿದ್ದಾರೆ. ಸಂತ್ರಸ್ತರಲ್ಲಿ ಬಹುತೇಕರು ಮಲಪ್ಪುರಂ ಜಿಲ್ಲೆಯ ವಿವಿಧ ಭಾಗದವರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಪ್ರವಾಸಿ ಡಬಲ್ ಡೆಕರ್ ಬೋಟ್​ನಲ್ಲಿ 40 ಪ್ರಯಾಣಿಕರಿದ್ದರು. ಗಾಯಾಳುಗಳನ್ನು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ತಕ್ಷಣ ಎಂಟು ಮಂದಿಯನ್ನು ರಕ್ಷಿಸಲಾಯಿತು. ದೋಣಿ ಮುಳುಗಿದ ಜಾಗದಲ್ಲಿ ಕೆಸರು ತುಂಬಿದ್ದುದರಿಂದ ರಕ್ಷಣಾ ಕಾರ್ಯಾಚರಣೆಗೂ ಅಡಚಣೆ ಉಂಟಾಗಿದೆ. ಆ ಪ್ರದೇಶ ಹೆಚ್ಚು ಆಳವಾಗಿತ್ತು. ಆದರೂ ಸ್ಥಳೀಯರು ಎಂಟು ಮಂದಿಯನ್ನು ರಕ್ಷಿಸಲು ಸಫಲರಾದರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಘಟನೆಯಲ್ಲಿನ ಪ್ರಾಣಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಮೃತರ ಸಂಬಂಧಿಕರಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಧ್ಯರಾತ್ರಿ ರಾಜ್ಯ ಆರೋಗ್ಯ ಇಲಾಖೆಯ ತುರ್ತು ಸಭೆ ಕರೆದು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಜೀವಹಾನಿಗೆ ಸಂತಾಪ ಸೂಚಿಸಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆ ಪರಿಣಾಮಕಾರಿ ಸಮನ್ವಯಕ್ಕೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: Kerala Boat Tragedy : ಕೇರಳದಲ್ಲಿ ಪ್ರವಾಸಿ ದೋಣಿ ಮುಳುಗಿ 18 ಮಂದಿ ಸಾವು, ಮುಂದುವರಿದ ಶೋಧ

Exit mobile version