Site icon Vistara News

ಕೇರಳ ಸ್ಫೋಟ; 3 ಸಾವಿರ ರೂ. ವ್ಯಯಿಸಿ ಬಾಂಬ್‌ ತಯಾರಿಸಿದ ಆರೋಪಿ, ಲಾಡ್ಜ್‌ನಲ್ಲಿದ್ದಿದ್ದು 10 ನಿಮಿಷ!

Dominic Martin

Kerala Bomb Blasts Accused Spent Just Rs 3,000 To Make Bombs: Sources

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕ್ರೈಸ್ತ ಸಮುದಾಯದ ಕನ್ವೆನ್ಶನ್‌ ಸೆಂಟರ್‌ನಲ್ಲಿ (Convention Centre) ಬಾಂಬ್‌ ಸ್ಫೋಟ (Kerala Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಡಾಮಿನಿಕ್‌ ಮಾರ್ಟಿನ್‌ (Dominic Martin) ಕುರಿತು ಹಲವು ವರದಿಗಳು ಲಭ್ಯವಾಗಿವೆ. ಆತನು ಕೇವಲ 3 ಸಾವಿರ ರೂಪಾಯಿ ಖರ್ಚು ಮಾಡಿ ಬಾಂಬ್‌ ತಯಾರಿಸಿರುವ ಆತ, ಕೇವಲ 10 ನಿಮಿಷಕ್ಕಾಗಿ ಲಾಡ್ಜ್‌ ಬುಕ್‌ ಮಾಡಿದ್ದ ಎಂದು ತಿಳಿದುಬಂದಿದೆ.

ಹೌದು, ಎಲೆಕ್ಟ್ರಿಕ್‌ ಸರ್ಕ್ಯೂಟ್‌ ಎಕ್ಸ್‌ಪರ್ಟ್‌ ಆಗಿರುವ ಡಾಮಿನಿಕ್‌ ಮಾರ್ಟಿನ್‌, ಕಚ್ಚಾ ವಸ್ತುಗಳನ್ನು ಬಳಸಿಯೇ ಕೇವಲ 3 ಸಾವಿರ ರೂ. ವ್ಯಯಿಸಿ ಬ್ಯಾಂಬ್‌ಗಳನ್ನು ತಯಾರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಡಾಮಿನಿಕ್‌ ಮಾರ್ಟಿನ್‌ ಕುಟುಂಬವು ಕೊಚ್ಚಿ ಬಳಿ ಕಳೆದ ಐದು ವರ್ಷದಿಂದ ನೆಲೆಸಿದೆ. ಡಾಮಿನಿಕ್‌ ಮಾರ್ಟಿನ್‌ ಗಲ್ಫ್‌ನಲ್ಲಿ ಹಲವು ವರ್ಷಗಳವರೆಗೆ ಕೆಲಸ ಮಾಡಿದ್ದು, ಎಲೆಕ್ಟ್ರಾನಿಕ್‌ ಡಿವೈಸ್‌ಗಳ ಬಗ್ಗೆ ತಿಳಿದುಕೊಂಡಿದ್ದಾನೆ ಎನ್ನಲಾಗಿದೆ. ಎರಡು ತಿಂಗಳ ಹಿಂದಷ್ಟೇ ಭಾರತಕ್ಕೆ ಬಂದಿರುವ ಈತ, ಪಟಾಕಿ ತಯಾರಿಸಲು ಬಳಸುವ ಕೆಳದರ್ಜೆಯ ಸ್ಫೋಟಕಗಳನ್ನು ಬಳಸಿ ಸುಧಾರಿತ ಸ್ಫೋಟಕ (IED) ತಯಾರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ಭೀಕರ ದೃಶ್ಯ

ತಪ್ಪೊಪ್ಪಿಕೊಳ್ಳಲು ಲಾಡ್ಜ್‌ಗೆ ಹೋದ

ಕನ್ವೆನ್ಶನ್‌ ಹಾಲ್‌ನಲ್ಲಿ ಸರಣಿ ಬಾಂಬ್‌ ಸ್ಫೋಟಿಸಿದ ಬಳಿಕ ತಪ್ಪೊಪ್ಪಿಕೊಳ್ಳಲೆಂದೇ ಡಾಮಿನಿಕ್‌ ಮಾರ್ಟಿನ್‌ ಲಾಡ್ಜ್‌ಗೆ ಹೋಗಿದ್ದ ಎಂದು ತಿಳಿದುಬಂದಿದೆ. ತ್ರಿಶ್ಶೂರ್‌ನಲ್ಲಿ ಲಾಡ್ಜ್‌ಗೆ ತೆರಳಿದ ಡಾಮಿನಿಕ್‌ ಮಾರ್ಟಿನ್‌, ಒರಿಜಿನಲ್‌ ಆಧಾರ್‌ ಕಾರ್ಡ್‌ ಕೊಟ್ಟು ಚೆಕ್‌ಇನ್‌ ಆಗಿದ್ದಾನೆ. ಕೋಣೆಗೆ ತೆರಳಿದ ಆತ, ಫೇಸ್‌ಬುಕ್‌ ಲೈವ್‌ ಬಂದು, ತಪ್ಪೊಪ್ಪಿಕೊಂಡಿದ್ದಾನೆ. ಈತ ಕೇವಲ 10 ನಿಮಿಷ ಲಾಡ್ಜ್‌ನಲ್ಲಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Kochi blast: ಕೇರಳದ ಸ್ಫೋಟಕ್ಕೆ ಹಮಾಸ್‌ ಲಿಂಕ್?‌ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಸಾವಿರಾರು ಕ್ರೈಸ್ತರು ಭಾನುವಾರ ಬೆಳಗ್ಗೆ (ಅಕ್ಟೋಬರ್‌ 29) ಪ್ರಾರ್ಥನೆ ಸಲ್ಲಿಸುವ ವೇಳೆ ಸುಧಾರಿತ ಸ್ಫೋಟಕ ಸಾಧನ (IED) ಮೂಲಕ ಸ್ಫೋಟಗೊಳಿಸಲಾಗಿದೆ. ಅದರಲ್ಲೂ, 9.40ರ ಸುಮಾರಿಗೆ ಟಿಫಿನ್‌ ಬಾಕ್ಸ್‌ನಲ್ಲಿ ಐಇಡಿ ಇಟ್ಟು ಮೊದಲು ಸ್ಫೋಟಿಸಲಾಗಿದೆ. ಇದಾದ ಬಳಿಕ ಹಲವು ಬಾರಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದಿಂದ 12 ವರ್ಷದ ಬಾಲಕಿ, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version