Site icon Vistara News

Kerala Congress: ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅರೆಸ್ಟ್! ಯಾರು ಈ ವಂಚಕ ಮಾವುಂಕಲ್?

K Sudhakaran

ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ (Kerala Congress President K Sudhakaran) ಅವರನ್ನು ಕೇರಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸ್ವಘೋಷಿತ ಪುರಾತನ ವಸ್ತುಗಳ ಡೀಲರ್ ಹಾಗೂ ವಂಚಕ ಮಾನ್ಸನ್ ಮಾವುಂಕಲ್‌ನ (conman Monson Mavunkal) ವಂಚನೆಯ ಪ್ರಕರಣದಲ್ಲಿ ಸುಧಾಕರನ್ ಕೂಡ ಭಾಗಿಯಾಗಿದ್ದಾರೆಂಬ ಆರೋಪವಿದೆ. ಕೊಚ್ಚಿ ಕ್ರೈಮ್ ಬ್ರ್ಯಾಂಚ್ ಪೊಲೀಸರು (Kerala Police) ದಿನವಿಡಿ ವಿಚಾರಣೆ ನಡೆಸಿ, ಕೊನೆಗೆ ಸುಧಾಕರನ್ ಅವರನ್ನು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದೆ ಕೆ ಸುಧಾಕರನ್ ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಒಂದೊಮ್ಮೆ ಸುಧಾಕರನ್ ಅವರನ್ನು ಬಂಧಿಸಿದರೆ, 50 ಸಾವಿರ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಯೊಂದಿಗೆ ಬಿಡುಗಡೆ ಮಾಡಬೇಕೆಂದು ಸೂಚಿಸಿತ್ತು. ಹಾಗಾಗಿ, ಸುಧಾಕರನ್ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕಾಸ್ಮೆಟಾಲಜಿಸ್ಟ್ ಎಂದು ಬಿಂಬಿಸಿಕೊಂಡಿದ್ದ ಮಾವುಂಕಲ್ ಗೆ ಚಿಕಿತ್ಸೆ ಕೊಡಿಸಿದ್ದರು ಎನ್ನಲಾದ ರಾಜಕಾರಣಿಗಳಲ್ಲಿ ಸುಧಾಕರನ್ ಕೂಡ ಒಬ್ಬರು. ಮಾವುಂಕಲ್‌ಗೆ ಸಂಬಂಧಿಸಿದ ವಂಚನೆ ಪ್ರಕರಣದ ದೂರುದಾರರೊಬ್ಬರು ಸುಧಾಕರನ್ ಅವರ ಸಮ್ಮುಖದಲ್ಲಿ ವಂಚಕ ಮಾವುಂಕಲ್‌ಗೆ ಹಣವನ್ನು ಹಸ್ತಾಂತರಿಸುವುದಾಗಿ ದೂರಿದ್ದರು. ಮಾವುಂಕಲ್ ಅವರು ಹಣದ ಒಂದು ಭಾಗವನ್ನು ಕಾಂಗ್ರೆಸ್ ನಾಯಕನಿಗೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Cyber Crime: ಮಹಾ ಸೈಬರ್ ವಂಚಕ ಸಿಐಡಿ ಪೊಲೀಸರ ಬಲೆಗೆ, ಐಟಿ ಇಲಾಖೆಗೇ ನಾಮ

ಪ್ರಾಚೀನ ವಸ್ತುಗಳ ಮಾರಾಟ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿಕೊಳ್ಳುವ ಮಾವುಂಕಲ್, ಮಧ್ಯಪ್ರಾಚ್ಯದಲ್ಲಿ ರಾಜಮನೆತನದ ಕುಟುಂಬಗಳಿಗೆ ಪುರಾತನ ವಸ್ತುಗಳನ್ನು ಮಾರಾಟ ಮಾಡುವುದರಿಂದ 2.62 ಲಕ್ಷ ಕೋಟಿ ರೂಪಾಯಿಗಳನ್ನು ಪಡೆದಿದ್ದೇನೆ ಎಂದು ಹೂಡಿಕೆದಾರರನ್ನು ವಂಚಿಸುತ್ತಿದ್ದ. ಎಚ್‌ಎಸ್‌ಬಿಸಿ ಬ್ಯಾಂಕ್‌ನಿಂದ ಕೇರಳದಲ್ಲಿರುವ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಮೊತ್ತವನ್ನು ಪಡೆಯಲು ಕಾನೂನು ಅಡೆತಡೆಗಳನ್ನು ನಿವಾರಿಸಲು ಹಣದ ಅವಶ್ಯಕತೆಯಿದೆ ಎಂದು ಹೇಳಿ, ಹಣವನ್ನು ವಸೂಲಿ ಮಾಡುತ್ತಿದ್ದ. ಅಲ್ಲದೇ, ಮಧ್ಯಪ್ರಾಚ್ಯದಿಂದ ಕೇರಳಕ್ಕೆ ಹಣವನ್ನು ವರ್ಗಾಯಿಸಲು ಇರುವ ಕಾನೂನು ಅಡೆತಡೆಗಳನ್ನು ನಿವಾರಿಸಲು ಸುಧಾಕರನ್ ಪ್ರಯತ್ನಿಸುತ್ತಾರೆ ಎಂದು ಹಣ ನೀಡುವವರಿಗೆ ಭರವಸೆ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ, ಮಾವುಂಕಲ್ ಜತೆಗಿನ ನಂಟಿನ ಕುರಿತು ಸುಧಾಕರನ್ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲದೇ ನಿರಾಕರಿಸಿಯೂ ಇಲ್ಲ. ಅಪ್ರಾಪ್ತೆ ಹುಡುಗಿಯನ್ನು ರೇಪ್ ಮಾಡಿದ ಆರೋಪ ಸಾಬೀತು ಹಿನ್ನೆಲೆಯಲ್ಲೇ ಕಳೆದ ವಾರವಷ್ಟೇ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version