ಜೆರುಸಲೇಂ: ಇಸ್ರೇಲ್‌ನಲ್ಲಿ ಕೈಗೊಂಡ ಕೃಷಿ ಸಂಶೋಧನೆ, ಕೃಷಿಯಲ್ಲಿ ಅವರು ಅಳವಡಿಸಿಕೊಂಡ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರವು ಇಸ್ರೇಲ್‌ಗೆ ಕಳುಹಿಸಿದ ೨೭ ರೈತರ ನಿಯೋಗದಲ್ಲಿದ್ದ ಬಿಜು ಕುರಿಯನ್ (೪೮) ಎಂಬ ರೈತ (Kerala Farmer Missing) ನಾಪತ್ತೆಯಾಗಿದ್ದಾರೆ. ಕೇರಳ ಸರ್ಕಾರವು ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹಾಗೂ ಸ್ಥಳೀಯ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದೆ.
ಕೇರಳ ಸರ್ಕಾರ ಕಳುಹಿಸಿರುವ ರೈತರ ನಿಯೋಗದಲ್ಲಿದ್ದ ಕಣ್ಣೂರು ಜಿಲ್ಲೆಯ ರೈತ ಫೆಬ್ರವರಿ ೧೭ರಂದು ಇಸ್ರೇಲ್‌ನ ಹೆರ್ಜಿಲಿಯಾದಿಂದ ನಾಪತ್ತೆಯಾಗಿದ್ದಾರೆ. “ರಾಜ್ಯದ ರೈತರೊಬ್ಬರು ಇಸ್ರೇಲ್‌ನಲ್ಲಿ ನಾಪತ್ತೆಯಾಗಿರುವುದು ಖೇದಕರ. ಈಗಾಗಲೇ ಭಾರತದ ರಾಯಭಾರ ಕಚೇರಿ ಹಾಗೂ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಕಾನೂನಾತ್ಮಕ ಪ್ರಕ್ರಿಯೆ ಜಾರಿಯಲ್ಲಿದೆ” ಎಂದು ಕೇರಳ ಕೃಷಿ ಸಚಿವ ಪಿ. ಪ್ರಸಾದ್ ಮಾಹಿತಿ ನೀಡಿದ್ದಾರೆ.
ಬೇಕಂತಲೇ ಕೃಷಿಕ ಪರಾರಿ?
ಬಿಜು ಕುರಿಯನ್ ಅವರು ಬೇಕಂತಲೇ ನಿಯೋಗದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಿಜು ಕುರಿಯನ್ ಅವರು ಫೆಬ್ರವರಿ ೧೯ರಂದು ಕುಟುಂಬಸ್ಥರಿಗೆ ಕರೆ ಮಾಡಿ ಮಾತನಾಡಿದ್ದಾರೆ. “ನಾನು ಇಸ್ರೇಲ್‌ನಲ್ಲಿಯೇ ಸುರಕ್ಷಿತವಾಗಿದ್ದೇನೆ. ಕುಟುಂಬಸ್ಥರು ಯಾರೂ ನನ್ನ ಬಗ್ಗೆ ಚಿಂತೆ ಮಾಡಬಾರದು ಹಾಗೂ ನನ್ನನ್ನು ಹುಡುಕಲು ಪ್ರಯತ್ನಿಸಬಾರದು” ಎಂಬುದಾಗಿ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿ ನೆಲೆಸಬೇಕು ಎಂಬುದು ರೈತನ ಕನಸಾಗಿತ್ತು ಎಂದೂ ಹೇಳಲಾಗುತ್ತಿದೆ. ಅದಕ್ಕಾಗಿ ಅವರು ನಿಯೋಗದಿಂದ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಿಜು ಕುರಿಯನ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ಇದನ್ನೂ ಓದಿ: ಏನಾಗಲ್ಲ ಎಂಬ ಧೈರ್ಯದಿಂದ ಪರೋಟಾ ತಿಂದು ಮೃತಪಟ್ಟ ಕೇರಳದ ವಿದ್ಯಾರ್ಥಿನಿ!