ತಿರುವನಂತಪುರಂ: ಸಹೋದರನಿಂದಲೇ ಗರ್ಭ ಧರಿಸಿದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಏಕ ಸದಸ್ಯ ಪೀಠದ ನ್ಯಾ. ಜಿಯಾದ್ ರೆಹಮಾನ್ ಅವರು ಗರ್ಭಪಾತ ಮಾಡಿಸಲು ಅನುಮತಿ ನೀಡಿದರು.
“ಗರ್ಭಪಾತಕ್ಕೆ ಅನುಮತಿ ನೀಡದೆ ಹೋದರೆ ಸಾಮಾಜಿಕ ವ್ಯವಸ್ಥೆ ಹಾಗೂ ಬಾಲಕಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿತು. ವೈದ್ಯಕೀಯ ಮಂಡಳಿಯು ಗರ್ಭಪಾತದ ಕುರಿತು ವರದಿ ಸಲ್ಲಿಸಿತ್ತು. 15 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಸಾಮಾಜಿಕ ವ್ಯವಸ್ಥೆ ಹಾಗೂ ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
“ಸಹೋದರನಿಂದಲೇ ಮಗು ಜನಿಸಿದೆ ಎಂಬ ಅಂಶವು ಹಲವು ಸಾಮಾಜಿಕ ಹಾಗೂ ವೈದ್ಯಕೀಯ ಬಿಕ್ಕಟ್ಟು, ಗೊಂದಲಗಳಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ಸಮಂಜಸವಾಗಿದೆ” ಎಂದು ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಸ್ಪಷ್ಟಪಡಿಸಿದರು. ಗರ್ಭ ಧರಿಸಿ 32 ವಾರದ ನಂತರ ಗರ್ಭಪಾತ ಮಾಡುವುದು ಗರ್ಭವತಿಯ ಆರೋಗ್ಯದ ದೃಷ್ಟಿಯಿಂದ ಕಷ್ಟಸಾಧ್ಯವಾದ ಕಾರಣ, ಶೀಘ್ರದಲ್ಲಿಯೇ ಗರ್ಭಪಾತ ಮಾಡಿಸಿ ಎಂದು ಕೂಡ ಕೋರ್ಟ್ ಸೂಚಿಸಿತು.
ವಿದ್ಯಾರ್ಥಿನಿಯರಿಗೂ ಮಾತೃತ್ವ ರಜೆ
ಉದ್ಯೋಗಸ್ಥ ಮಹಿಳೆಯರು ಕನಿಷ್ಠ ಮೂರು ತಿಂಗಳಿಂದ, ಕೆಲವು ಷರತ್ತುಗಳು ಅನ್ವಯಿಸಿ ಗರಿಷ್ಠ 6ತಿಂಗಳವರೆಗೆ ಮಾತೃತ್ವ ರಜೆ ಪಡೆಯಬಹುದು ಎಂಬ ನಿಯಮ ಇದೆ. ಆದರೆ, ಕೆಲ ತಿಂಗಳ ಹಿಂದೆ, ಇದೇ ಮೊದಲ ಬಾರಿಗೆ ಕೇರಳದ ಮಹಾತ್ಮ ಗಾಂಧಿ ಯೂನಿವರ್ಸಿಟಿ (MGU) ವಿದ್ಯಾರ್ಥಿನಿಯರಿಗೂ ಮಾತೃತ್ವ ರಜೆ ಮಂಜೂರು ಮಾಡಿದೆ. 18 ವರ್ಷ ಮೇಲ್ಪಟ್ಟ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ 60 ದಿನಗಳು (2 ತಿಂಗಳು) ಹೆರಿಗೆ ರಜೆ ನೀಡುವುದಾಗಿ ಯೂನಿವರ್ಸಿಟಿ ತಿಳಿಸಿದೆ.
ಇದನ್ನೂ ಓದಿ: Smriti Irani: ಗರ್ಭಪಾತದ ನೋವಿನ ಮಧ್ಯೆಯೂ ಧಾರಾವಾಹಿ ಚಿತ್ರೀಕರಣಕ್ಕೆ ತೆರಳಿದ ಕಥೆ ಹಂಚಿಕೊಂಡ ಸ್ಮೃತಿ ಇರಾನಿ
ಕೆಲವು ಯುವತಿಯರು ಮದುವೆ ಬಳಿಕವೂ ವ್ಯಾಸಂಗ ಮುಂದುವರಿಸುತ್ತಾರೆ. ಅವರು ಈ ಮಧ್ಯೆ ಗರ್ಭಿಣಿಯಾದರೆ ಹೆರಿಗೆ ಸಂದರ್ಭದಲ್ಲಿ ಅನಿವಾರ್ಯವಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಗುತ್ತದೆ. ಅಂಥ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೆ ಕೈಬಿಡುವುದನ್ನು ತಪ್ಪಿಸುವ ಸಲುವಾಗಿಯೇ ವಿಶ್ವವಿದ್ಯಾನಿಲಯ ಈ ಹೆರಿಗೆ ರಜೆ ಕೊಡಲು ನಿರ್ಧರಿಸಿದೆ.