ತಿರುವನಂತಪುರಂ: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಕೇರಳಕ್ಕೆ ಕಾಲಿಟ್ಟಿದ್ದು, ಅಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಈ ಭಾರತ್ ಜೋಡೋ ಯಾತ್ರೆ ನಿಮಿತ್ತ ಹೆದ್ದಾರಿ ಅಕ್ಕಪಕ್ಕದಲ್ಲಿ ಕಾನೂನು ಬಾಹಿರವಾಗಿ ಬ್ಯಾನರ್ಗಳನ್ನೆಲ್ಲ ಹಾಕುತ್ತಿದ್ದಾರೆ ಎಂದು ಕೇರಳ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಪಾದಯಾತ್ರೆ ನಿಯಂತ್ರಣ ಮಾಡಬೇಕು. ಅವರಿಗೆ ನಿರ್ದಿಷ್ಟ ರಸ್ತೆಯನ್ನು ಮಾತ್ರ ಮೀಸಲಿಡಬೇಕು. ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ‘ನಿರ್ದಿಷ್ಟ ರಾಜಕೀಯ ಪಕ್ಷವೊಂದು ತಿರುವನಂತಪುರಂನಿಂದ ತ್ರಿಶೂರ್ವರೆಗೆ, ಅದರಾಚೆಗೂ ಹೆದ್ದಾರಿಯ ಅಕ್ಕಪಕ್ಕವೆಲ್ಲ ಕಾನೂನು ಬಾಹಿರವಾಗಿ ಧ್ವಜಗಳು, ಬ್ಯಾನರ್ಗಳ ಅಳವಡಿಕೆ ಮಾಡಲಾಗಿದೆ’ ಎಂದು ಕೋರ್ಟ್ ಹೇಳಿದೆ. ಇಲ್ಲೆಲ್ಲೂ ಕಾಂಗ್ರೆಸ್ ಎಂದು ಅದು ಉಲ್ಲೇಖ ಮಾಡಿಲ್ಲ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ ಈ ವಿಚಾರಣೆ ನಡೆಸಿದೆ. ‘ರಸ್ತೆಯುದ್ದಕ್ಕೂ ಒಂದು ರಾಜಕೀಯ ಪಕ್ಷದ ಧ್ವಜ, ಬ್ಯಾನರ್ಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ, ಸಾಲಾಗಿ ಹಾಕುವುದು ಸರಿಯಲ್ಲ. ಇದರಿಂದ ಆ ಹೆದ್ದಾರಿ ಮೂಲಕ ಸಾಗುವ ವಾಹನ ಸಂಚಾರರ ಗಮನ ಅದರೆಡೆಗೆ ಸೆಳೆಯುತ್ತದೆ. ಅದೇನಿದೆ? ಅದರಲ್ಲೇನಿದೆ ಎಂದು ಓದಲು ಮುಂದಾಗುತ್ತಾರೆ. ಹೀಗಾದಾಗ ಅವರು ಡ್ರೈವಿಂಗ್ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು. ಇವಿಷ್ಟೇ ಅಲ್ಲ, ಇಷ್ಟು ದೊಡ್ಡ ಬ್ಯಾನರ್ಗಳು, ರಾಜಕೀಯ ನಾಯಕರ ಫೋಟೋಗಳಿರುವ ಬೋರ್ಡ್ಗಳೆಲ್ಲ ಸಡಿಲಗೊಂಡು ರಸ್ತೆಗೆ ಬಿದ್ದರೆ, ಆ ಕ್ಷಣದಲ್ಲಿ ಅಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದರೆ ದೊಡ್ಡ ಅಪಘಾತವೇ ಆಗುತ್ತದೆ. ಅದರಲ್ಲೂ ದ್ವಿಚಕ್ರವಾಹನ ಸವಾರರಿಗೇ ಅಪಾಯ ಹೆಚ್ಚು’ ಎಂಬುದನ್ನೂ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದ್ದಾರೆ.
ಅತ್ಯುತ್ತಮ ಪರಿಸರ ವ್ಯವಸ್ಥೆ, ಉತ್ತಮ ರಸ್ತೆಗಳು, ಪಾದಚಾರಿ ಮಾರ್ಗಗಳು, ಮನರಂಜನಾ ಸ್ಥಳಗಳ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸಲಾಗಿದೆ. ಆದರೆ ಈಗ ಇಂಥ ಜಾಗಗಳೆಲ್ಲ ಫ್ಲೆಕ್ಸ್, ಬ್ಯಾನರ್, ಧ್ವಜಗಳು, ದೊಡ್ಡದೊಡ್ಡ ಬ್ಯಾನರ್ಗಳಿಂದಲೇ ತುಂಬಿಹೋಗಿವೆ. ಇದನ್ನು ಅಕ್ರಮ ಅಳವಡಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಹೀಗೆಲ್ಲ ಮಾಡುವುದರಿಂದ ನಗರದ ಸೌಂದರ್ಯವೂ ಹಾಳಾಗುತ್ತದೆ. ಸುರಕ್ಷಿತ ಕೂಡ ಅಲ್ಲ. ಹೀಗಿದ್ದಾಗ್ಯೂ ಅಧಿಕಾರಿಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಹಾಗೇ, ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: Bharat Jodo Yatra | ಕೇರಳದಲ್ಲಿ ರಾಹುಲ್ ಯಾತ್ರೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದೇಕೆ?