ತಿರುವನಂತಪುರಂ: ಸೆಪ್ಟೆಂಬರ್ 22ರಂದು 13 ರಾಜ್ಯಗಳಲ್ಲಿ ಪಿಎಫ್ಐಗೆ ಸಂಪರ್ಕ ಇರುವ ಪ್ರದೇಶಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ರೇಡ್ ಮಾಡಿದ್ದನ್ನು ಖಂಡಿಸಿ ಇಂದು ಪಿಎಫ್ಐ ಸಂಘಟನೆ ಕೇರಳದಲ್ಲಿ ಬಂದ್ಗೆ ಕರೆ ನೀಡಿದೆ. ಈ ಬಂದ್ನ್ನು ಸಂಪೂರ್ಣ ಹಿಂಸಾಚಾರವನ್ನಾಗಿ ಮಾರ್ಪಡಿಸಿದೆ. ಬೆಳಗ್ಗೆಯಿಂದಲೂ ಸಿಕ್ಕಸಿಕ್ಕ ವಾಹನಗಳಿಗೆ ಕಲ್ಲು ಹೊಡೆಯುತ್ತ, ಟೈಯರ್ಗಳನ್ನು ಸುಡುತ್ತಿದ್ದಾರೆ ಪಿಎಫ್ಐ ಕಾರ್ಯಕರ್ತರು. ಇವರ ಪ್ರತಿಭಟನೆಯಿಂದ ರಾಜ್ಯಾದ್ಯಂತ ಅವ್ಯವಸ್ಥೆ ಭುಗಿಲೆದ್ದ ಬೆನ್ನಲ್ಲೇ, ಈ ಕೇಸ್ನ್ನು ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಈ ಹಿಂದೆ 2019ರಲ್ಲಿ ಬಂದ್ ಪ್ರಕರಣವೊಂದರ ಕುರಿತು ತೀರ್ಪು ನೀಡಿದ್ದ ಕೇರಳ ಹೈಕೋರ್ಟ್, ‘ಯಾವುದೇ ಸಂಘಟನೆಯಾಗಲೀ, ಯಾರೇ ಆಗಲೀ ಪೂರ್ವ ಅನುಮತಿ, ಸೂಚನೆ ಇಲ್ಲದೆ, ಏಕಾಏಕಿ ಬಂದ್ಗೆ ಕರೆಕೊಡುವಂತಿಲ್ಲ. ಅಂದರೆ ಬಂದ್ ನಡೆಸುವ ದಿನಕ್ಕೂ ಏಳುದಿನಗಳ ಮೊದಲೇ ಅದನ್ನು ತಿಳಿಸಬೇಕಾಗುತ್ತದೆ’ ಎಂದು ಹೇಳಿತ್ತು. ಅದೇ ತೀರ್ಪನ್ನು ಇಂದು ಉಲ್ಲೇಖಿಸಿದ ಕೋರ್ಟ್, ‘ಕೇರಳದಲ್ಲಿ ಹರತಾಳ (ಬಂದ್)ವನ್ನು ಈ ಹಿಂದೆಯೇ ನಿಷೇಧಿಸಲಾಗಿದೆ. ಈಗ ನಿನ್ನೆಯಿಂದ ನಡೆಯುತ್ತಿರುವ ಪ್ರತಿಭಟನೆ ಮಧ್ಯೆಯೇ ಬಂದ್ಗೆ ಕರೆಕೊಟ್ಟು, ಅದನ್ನು ಹಿಂಸಾಚಾರ ಸ್ವರೂಪಕ್ಕೆ ತಿರುಗಿಸಲಾಗಿದೆ. ಪೂರ್ವಾನುಮತಿ ಪಡೆದಿಲ್ಲ’ ಎಂದು ಹೇಳಿದೆ. ಹಾಗೇ, ‘ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿ, ದಾಂಧಲೆ ಎಬ್ಬಿಸಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ಪೊಲೀಸರಿಗೆ ಸೂಚನೆ ನೀಡಿದೆ.
ಪಿಎಫ್ಐ ಕಾರ್ಯಕರ್ತರ ಮನೆ, ಕಚೇರಿ ಮೇಲೆ ಎನ್ಐಎ ನಡೆಸಿದ ದಾಳಿಯನ್ನು ಖಂಡಿಸಿ ಕೇರಳದಲ್ಲಿ ನಿನ್ನೆಯಿಂದಲೂ ಪ್ರತಿಭಟನೆ ನಡೆಯುತ್ತಿದೆ. ಇಂದು ಮುಂಜಾನೆ 6ರಿಂದ ಸಂಜೆ 6ರವರೆಗೂ ಬಂದ್ ನಡೆಸುವುದಾಗಿ ಪಿಎಫ್ಐ ಹೇಳಿತ್ತು. ಈ ಹಿಂದೆ 2012ರಲ್ಲಿಯೇ ಕೇರಳ ಹೈಕೋರ್ಟ್ ಪಿಎಫ್ಐ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದೂ ಹೇಳಿತ್ತು. ಈಗಲೂ ಸಹ ಪಿಎಫ್ಐ ಬಂದ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: PFI Protest | ಕೇರಳದಲ್ಲಿ ಹಿಂಸಾಚಾರ; ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪಿಎಫ್ಐ ಕಾರ್ಯಕರ್ತರು