ತಿರುವನಂತಪುರಂ: 15 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿ, ಆಕೆ ಗರ್ಭವತಿಯಾಗುವಂತೆ ಮಾಡಿದ ದುರುಳ ತಂದೆಗೆ ಕೇರಳ ನ್ಯಾಯಾಲಯವು ಮೂರು ಅವಧಿಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜ್ಯದ ಮಲಪ್ಪುರದಲ್ಲಿ ದುರುಳ ತಂದೆಯು ಕೃತ್ಯ ಎಸಗಿದ್ದು, ಆತನಿಗೆ ಮಂಜೇರಿ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ನ್ಯಾಯಾಧೀಶ ರಾಜೇಶ್ ಕೆ. ಅವರು ಅಪರಾಧಿಗೆ ಮೂರು ಅವಧಿಯ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಾಗೆಯೇ, 6.6 ಲಕ್ಷ ರೂ. ದಂಡವನ್ನೂ ವಿಧಿಸಿದ್ದಾರೆ. ಬಾಲಕಿಯ ತಂದೆ ಮೊದಲು ಮದರಸಾದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಜನಾಕ್ರೋಶ ಇನ್ನೂ ಹೆಚ್ಚಾಗಿದೆ.
2021ರ ಮಾರ್ಚ್‌ನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಬಾಲಕಿಯ ತರಗತಿ ಇರಲಿಲ್ಲ. ಆನ್‌ಲೈನ್‌ನಲ್ಲಿ ಕ್ಲಾಸ್ ನಡೆಯುತ್ತಿದ್ದ ಕಾರಣ ಆಕೆ ಮನೆಯಲ್ಲಿಯೇ ಇದ್ದಳು. ಇದೇ ವೇಳೆ ಆಕೆಯ ತಂದೆಯು ಮಲಗುವ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲ, ಇದನ್ನು ಬೇರೆಯವರಿಗೆ ಹೇಳಿದರೆ ನಿನ್ನ ತಾಯಿಯನ್ನು ಕೊಲ್ಲುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಬಾಲಕಿಯು ಯಾರಿಗೂ ಹೇಳಿಲ್ಲ. ಅಷ್ಟೇ ಅಲ್ಲ, 2021 ಅಕ್ಟೋಬರ್‌ವರೆಗೂ ಮಗಳ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ.
ತರಗತಿ ಆರಂಭವಾಗಿ ಬಾಲಕಿ ಶಾಲೆಗೆ ಹೋಗುತ್ತಲೇ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೊದಲಿಗೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಯಾವುದೇ ತೊಂದರೆ ಇರಲಿಲ್ಲ. ಆದರೆ, 2022ರ ಜನವರಿಯಲ್ಲಿ ಬಾಲಕಿಗೆ ಅಸಹನೀಯ ಹೊಟ್ಟೆ ನೋವು ಕಾಣಿಸಿದೆ. ಇದಾದ ಬಳಿಕ ತಪಾಸಣೆ ನಡೆಸಿದಾಗ ಆಕೆ ಗರ್ಭವತಿಯಾಗಿರುವುದು ಗೊತ್ತಾಗಿದೆ. ಆಗ ಆಕೆಯ ತಂದೆಯ ಕೃತ್ಯ ಬಯಲಾಗಿದೆ. ಡಿಎನ್‌ಎ ಪರೀಕ್ಷೆ ಆಧರಿಸಿ ಸರ್ಕಾರಿ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಪರಾಧಿಗೆ ಮೂರು ಅವಧಿಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆತನನ್ನು ಜೀವನಪರ್ಯಂತ ಜೈಲಿನಲ್ಲಿಯೇ ಇರಿಸಬೇಕು ಎಂದು ಕೂಡ ನ್ಯಾಯಾಧೀಶರು ಸೂಚಿಸಿದ್ದಾರೆ.
ಇದನ್ನೂ ಓದಿ: Asaram Bapu : ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್ ಬಾಪು ದೋಷಿ, ಗಾಂಧಿನಗರ ಸೆಷನ್ಸ್ ಕೋರ್ಟ್ ತೀರ್ಪು