ತಿರುವನಂತಪುರ: ಚರ್ಚ್ ನಡೆಸುತ್ತಿದ್ದ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಳಿ ಸುದ್ದಿಯಾಗಿದ್ದ (Kerala Medical College Scam) ಚರ್ಚ್ ಆಫ್ ಸೌತ್ ಇಂಡಿಯಾದ (ಸಿಎಸ್‌ಐ) ದಕ್ಷಿಣ ಕೇರಳ ಧರ್ಮಪ್ರಾಂತ್ಯದ ಬಿಷಪ್ ಧರ್ಮರಾಜ್ ರಸಾಲಂ ಅವರನ್ನು ವಲಸೆ ಅಧಿಕಾರಿಗಳು ಮಂಗಳವಾರ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸೂಚಿಸಿದ್ದರೂ, ಅವರು ನಿಗದಿಯಂತೆ ಬ್ರಿಟನ್‌ಗೆ ತೆರಳಲು ಮುಂದಾಗಿದ್ದರಿಂದ ಇಡಿ ಅಧಿಕಾರಿಗಳ ಮನವಿಯ ಮೇರೆಗೆ ವಲಸೆ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಬುಧವಾರ ಇಡಿ ಅಧಿಕಾರಿಗಳು ಅವರ ವಿಚಾರಣೆ ನಡೆಸಲಿದ್ದಾರೆ.
ಚರ್ಚ್ ಆಫ್ ಸೌತ್ ಇಂಡಿಯಾದ (ಸಿಎಸ್‌ಐ) ಆಡಳಿತಕ್ಕೆ ಒಳಪಟ್ಟಿರುವ ಕರಾಕೋಣಂನಲ್ಲಿರುವ ಡಾ. ಸೋಮೆರ್ವೆಲ್ ಸ್ಮಾರಕ ಸಿಎಸ್‌ಐ ವೈದ್ಯಕೀಯ ಕಾಲೇಜಿನ ಪ್ರವೇಶಕ್ಕೆ ಅಕ್ರಮವಾಗಿ ಶುಲ್ಕ ಸ್ವೀಕರಿಸಲಾಗುತ್ತಿತ್ತು ಮತ್ತು ಕಪ್ಪು ಹಣದ ಮೂಲಕ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಕಾರಣಕ್ಕೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸೋಮವಾರ ಕಾಲೇಜಿನ ಮೇಲೆ ಹಾಗೂ ಸಂಸ್ಥೆಯ ನಿರ್ದೇಶಕರುಗಳ ಮನೆಯ ಮೇಲೆ ದಾಳಿ ನಡೆಸಿದ್ದರು.
ಮಂಗಳವಾರ ಬಿಷಪ್ ಧರ್ಮರಾಜ್ ರಸಾಲಂರನ್ನು ಭೇಟಿಯಾಗಿದ್ದ ಇಡಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೂ ಅವರು ಬ್ರಿಟನ್‌ಗೆ ತೆರಳಲು ಮುಂದಾಗಿದ್ದರು. ಸುಮಾರು ೨೫ ವಿದ್ಯಾರ್ಥಿಗಳು ಕಾಲೇಜು ಅಕ್ರಮವಾಗಿ ಶುಲ್ಕ ಸಂಗ್ರಹಿಸುತ್ತಿರುವ ಕುರಿತು ದೂರು ನೀಡಿದ್ದಾರೆ. ಈ ಕುರಿತು ಈಗಾಗಲೇ ಕೇರಳ ಪೊಲೀಸ್ ಪಡೆಯ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ವಿದ್ಯಾರ್ಥಿಗಳಿಂದ ಕಾಲೇಜು ಕ್ಯಾಪಿಟೇಷನ್ ಶುಲ್ಕವಾಗಿ ೫೦ ಲಕ್ಷ ರೂ. ಸಂಗ್ರಹಿಸುತ್ತಿತ್ತೆಂದು ಆರೋಪಿಸಲಾಗಿದೆ.
ಹಲವು ಅಕ್ರಮಗಳು ಬೆಳಕಿಗೆ
ಚರ್ಚ್ ನಡೆಸುತ್ತಿರುವ ಈ ಕಾಲೇಜಿನಲ್ಲಿನ ಹಲವು ಅಕ್ರಮಗಳು ಬಯಲಿಗೆ ಬಂದಿವೆ. ೨೦೧೮ರಲ್ಲಿ ಪ್ರವೇಶ ಪಡೆಯುವಾಗ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚಿಸಿದ ಪ್ರಕರಣ ಕೂಡ ನಡೆದಿತ್ತು. ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ಪ್ರವೇಶ ಕೂಡ ನೀಡುತ್ತಿರಲಿಲ್ಲ. ಈ ಬಗ್ಗೆ ಹೈಕೋರ್ಟ್‌ಗೆ ದೂರು ಸಹ ನೀಡಲಾಗಿತ್ತು. ದುಡ್ಡು ಪಡೆದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಅಕ್ರಮವಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಕೂಡ ಕಲ್ಪಿಸಲಾಗುತ್ತಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರು ಕಾಲೇಜು ಯಾವುದೇ ಅಕ್ರಮ ನಡೆಸಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಇದನ್ನು ನ್ಯಾಯಾಲವು ನಿರಾಕರಿಸಿತ್ತು. ಹೀಗಾಗಿ ಈಗ ಇಡಿ ಅಧಿಕಾರಿಗಳು ಈ ದಾಳಿ ನಡೆಸಿರುವುದು ಮಹತ್ವ ಪಡೆದಿದೆ. ಸೋಮವಾರ ಬೆಳಗ್ಗೆಯೇ ದಾಳಿ ನಡೆಸಿದ್ದ ಅಧಿಕಾರಿಗಳು ಸುಮಾರು ೧೩ ಗಂಟೆಗಳ ಕಾಲ ತನಿಖೆ ನಡೆಸಿದ್ದರು.
ವೈದ್ಯಕೀಯ ಕಾಲೇಜಿನ ನಿರ್ದೇಶಕ ಬೆನೆಟ್ ಅಬ್ರಹಾಂ ಮತ್ತು ಸಿಎಸ್‌ಐ ಚರ್ಚ್ ಕಾರ್ಯದರ್ಶಿ ಪ್ರವೀಣ್ ಅವರ ನಿವಾಸಗಳು ಸೇರಿದಂತೆ ಹಲವು ಕಡೆ ದಾಳಿಗಳನ್ನು ನಡೆಸಲಾಗಿತ್ತು. ಬೆನೆಟ್ ಅಬ್ರಹಾಂ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಇದನ್ನೂ ಓದಿ| ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ, ಇಡಿ ತನಿಖೆ ಸಾಧ್ಯತೆ