ನವದೆಹಲಿ: ಕರ್ನಾಟಕದ ನರೆಯ ರಾಜ್ಯ ಕೇರಳದ (Kerala) ಹೆಸರು ಬದಲಾವಣೆಯಾಗಲಿದೆ. ಈ ಕುರಿತು ಕೇರಳ ರಾಜ್ಯ ವಿಧಾನಸಭೆ (Kerala Assembly) ಅವಿರೋಧವಾಗಿ ನಿರ್ಣಯ (resolution passed) ಕೈಗೊಂಡಿದ್ದು, ‘ಕೇರಳ’ ರಾಜ್ಯವನ್ನು ಇನ್ನು ಮುಂದೆ ‘ಕೇರಳಂ’ ಎಂದು ಕರೆಯಲಾಗುತ್ತದೆ. ಕೇರಳದ ಹೆಸರನ್ನು ‘ಕೇರಳ’ ಬದಲಾಗಿ ‘ಕೇರಳಂ’ (Keralam) ಎಂದು ಅಧಿಕೃತವಾಗಿ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು (Central Government) ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿತು. ಭಾರತದ ಸಂವಿಧಾನದ (Constitution of India) ಎಂಟನೇ ಶೆಡ್ಯೂಲ್‌ನಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರವನ್ನು ಒತ್ತಾಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ನಿರ್ಣಯವನ್ನು ಮಂಡಿಸಿದರು.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷವು ಯಾವುದೇ ತಿದ್ದುಪಡಿಗಳನ್ನು ಅಥವಾ ಮಾರ್ಪಾಡುಗಳನ್ನು ಸೂಚಿಸದೆ ಈ ನಿರ್ಣಯವನ್ನು ಅಂಗೀಕರಿಸಿದೆ. ನಂತರ, ವಿಧಾನಸಭೆಯಲ್ಲಿ ನಿರ್ಣಯದ ಪರವಾಗಿ ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು ಎಂದು ಸ್ಪೀಕರ್ ಎ ಎನ್ ಶಂಶೀರ್ ಹೇಳಿದರು.
ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ರಾಜ್ಯವನ್ನು ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯುತ್ತಿದ್ದರೂ, ಬೇರೆ ಭಾಷೆಗಳಲ್ಲಿ ಕೇರಳ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಮಲಯಾಳಂ ಭಾಷಿಕ ಸಮುದಾಯಗಳಿಗೆ ಅಖಂಡ ಕೇರಳ ರಚನೆಯ ಅಗತ್ಯ ಬಲವಾಗಿ ಹೊರಹೊಮ್ಮಿತ್ತು. ಆದರೆ, ಸಂವಿಧಾನದ ಮೊದಲನೇ ಶೆಡ್ಯೂಲ್‌ನಲ್ಲಿ ಕೇರಳಂ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಯಿತು ಎಂದು ತಿಳಿಸಿದರು.
ಸಂವಿಧಾನದ 3 ನೇ ಪರಿಚ್ಛೇದದ ಅಡಿಯಲ್ಲಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ‘ಕೇರಳಂ’ ಎಂದು ಮರುನಾಮಕರಣ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಸಭೆಯು ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ವಿನಂತಿಸುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದರು.
ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ನಿರ್ಣಯ ಅಂಗೀಕರಿಸಿದ ಕೇರಳ ರಾಜ್ಯ ವಿಧಾನಸಭೆ
ಏಕರೂಪ ನಾಗರಿಕ ಸಂಹಿತೆ(Uniform Civil Code – UCC) ಜಾರಿಗೆ ವಿರೋಧಿಸಿ ಕೇರಳ ವಿಧಾಸನಭೆಯು (Kerala Assembly) ಅವಿರೋಧವಾಗಿ ನಿರ್ಣಯವನ್ನು (Resolution) ಕೈಗೊಂಡಿದೆ. ಯಾವುದೇ ಸಂವಾದ, ಒಪ್ಪಿಗಳಿಲ್ಲದೇ ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಯು ನಮ್ಮ ಸಂವಿಧಾನದ (Constitution of India) ಜಾತ್ಯಾತೀತ ಸ್ವರೂಪಕ್ಕೆ ಧಕ್ಕೆ ತರಲಿದೆ ಎಂದು ಕೇರಳ ವಿಧಾನಸಭೆಯು ಅಭಿಪ್ರಾಯಪಟ್ಟಿದೆ. ಯುಸಿಸಿ ವಿರೋಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (kerala cm pinarayi vijayan) ಅವರು ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯಕ್ಕೆ ಎಡ ಪ್ರಜಾಸತ್ತಾತ್ಮಕ ವೇದಿಕೆ (LDF) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ವೇದಿಕೆ (UDF)ನ ಸದಸ್ಯರು ಒಕ್ಕೂರಲ ಬೆಂಬಲ ನೀಡಿದರು. ಯುಸಿಸಿ ಪರವಾಗಿರುವ ಬಿಜೆಪಿಯ ಯಾವುದೇ ಸದಸ್ಯರು ಕೇರಳ ವಿಧಾನಸಭೆಯಲ್ಲಿ ಇಲ್ಲ.
ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ನಿರ್ಣಯ ಕೈಗೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕೇರಳ ಪಾತ್ರವಾಗಿದೆ. ಸಂವಿಧಾನದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕಲ್ಪನೆಯು ಸಂಘ ಪರಿವಾರದ ಯುಸಿಸಿಯ ಆವೃತ್ತಿಯಂತೆಯೇ ಅಲ್ಲ. ಅವರ ಕಾನೂನಿನ ಕಲ್ಪನೆಯು ಮನುಸ್ಮೃತಿಯಂತೆಯೇ ಇದೆ. ಅವರು ಅದನ್ನು ಮೊದಲೇ ಸ್ಪಷ್ಟಪಡಿಸಿದ್ದರು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ನಿರ್ಣಯವನ್ನು ಮಂಡಿಸಿ ಹೇಳಿದರು.
ಈ ಸುದ್ದಿಯನ್ನೂ ಓದಿ: ಮಹಾರಾಷ್ಟ್ರದ ಔರಂಗಾಬಾದ್ ಇನ್ಮುಂದೆ ಛತ್ರಪತಿ ಸಂಭಾಜಿ ನಗರ, ಉಸ್ಮಾನಾಬಾದ್ಗೆ ಧಾರಾಶಿವ ಎಂದು ಮರುನಾಮಕರಣ
ಯುಸಿಸಿ ಬಗ್ಗೆ ಸಾಕಷ್ಟು ಸದ್ದುಗಳಾಗುತ್ತಿದ್ದರೂ, ಉದ್ದೇಶಿತ ಕಾನೂನಿನ ಕರಡನ್ನು ಈವರೆಗೆ ಪ್ರಸ್ತಾಪಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ ಉತ್ತರಾಖಂಡ ಸರ್ಕಾರ ರಚಿಸಿದ ತಜ್ಞರ ಸಮಿತಿಯು ರಾಜ್ಯ ಸರ್ಕಾರದ ಮುಂದೆ ಕರಡು ಪ್ರತಿ ಮಂಡಿಸಲು ಸಾಧ್ಯವಿಲ್ಲ. ಇನ್ನು ಹದಿನೈದು ದಿನದಲ್ಲಿ ಕರಡು ಸಿದ್ಧವಾಗಲಿದೆ ಎಂದು ಹೇಳಿ ಸುಮಾರು ದಿನಗಳಾದರೂ ಕರಡು ರಚಿಸಲು ಸಾಧ್ಯವಾಗಿಲ್ಲ ಎಂಬ ಸಂಗತಿಯೂ ಗಮನ ಸೆಳೆದಿದೆ.
ಉದ್ದೇಶಿತ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಸಂಬಂಧ ಕೇಂದ್ರ ಕಾನೂನು ಆಯೋಗವು ಸಲಹೆಗಳಿಗೆ ಆಹ್ವಾನಿಸಿತ್ತು. ಈ ಸಲಹೆಗಳನ್ನು ಸಲ್ಲಿಸಲು ಜುಲೈ 28 ಕೊನೆಯ ದಿನವಾಗಿತ್ತು. ಮೂಲಗಳ ಪ್ರಕಾರ ಆಯೋಗವು 3 ಲಕ್ಷಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿದೆ ಎನ್ನಲಾಗಿದೆ.