ತಿರುವನಂತಪುರಂ, ಕೇರಳ: ಕೇರಳದ(Kerala Politics) ರೋಮನ್ ಕ್ಯಾಥೋಲಿಕ್ ಬಿಷಪ್ ಒಬ್ಬರು ಭಾರತೀಯ ಜನತಾ ಪಕ್ಷದ (BJP) ಪರವಾಗಿ ಮಾತನಾಡಿದ್ದು, ಅವರ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಒಂದು ವೇಳೆ ಕೇಂದ್ರ ಸರ್ಕಾರವು ನೈಸರ್ಗಿಕ ರಬ್ಬರ್ ಬೆಲೆಯನ್ನು ಕೆ.ಜಿ.ಗೆ 300 ರೂ. ಮಾಡಿದರೆ, ಚರ್ಚ್‌ನಲ್ಲಿ ನಂಬಿಕೆ ಇಟ್ಟವರು ಈ ಬಾರಿ ಕೇರಳದಿಂದ ಬಿಜೆಪಿಯ ಮೊದಲ ಸಂಸದರನ್ನು ಆಯ್ಕೆ ಮಾಡಲು ನೆರವು ನೀಡಲಿದ್ದಾರೆ ಎಂದು ತಲಶ್ಶೇರಿಯಲ್ಲಿ ಮಾರ್ ಜೋಸೆಫ್ ಪಂಪ್ಲಾನಿ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.
ಉತ್ತರ ಕೇರಳದ ತಲಶ್ಶೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕ್ಯಾಥೋಲಿಕ್ ರೈತರ ಸಮಾವೇಶದಲ್ಲಿ ಮಾತನಾಡಿದ ಬಿಷಪ್, ದೇಶವನ್ನು ಆಳುತ್ತಿರುವ ಪಕ್ಷವನ್ನು ಚರ್ಚ್‌ಗಳಿಂದ ದೂರ ಇಡುವ ಅಗತ್ಯವಿಲ್ಲ. ಬಿಜೆಪಿಯ ಕಡೆಗೆ ಚರ್ಚ್ ಎಂದಿಗೂ ಅಸ್ಪೃಶ್ಯತೆಯನ್ನು ಹೊಂದಿಲ್ಲ. ಯಾಕೆಂದರೆ, ಅದು ದೇಶವನ್ನು ಆಳುತ್ತಿರುವ ಪಕ್ಷವಾಗಿದೆ. ಒಂದು ವೇಳೆ, ರೈತರ ಸಮಸ್ಯೆಯನ್ನು ಬಗೆಹರಿಸಿದರೆ, ನಾವು ಬಿಜೆಪಿಗೆ ವೋಟ್ ಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.
ಕೇರಳದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ನೈಸರ್ಗಿಕ ರಬ್ಬರ್‌ಗೆ ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 130ರಿಂದ 150 ರೂ. ಇದೆ. ಕೇಂದ್ರ ಸರ್ಕಾರವು ಈ ಬೆಲೆಯನ್ನು ಕೆಜಿಗೆ 300 ರೂ.ಗೆ ಏರಿಕೆ ಮಾಡಬೇಕು ಎಂಬುದು ಬಿಷಪ್ ಅವರ ಬೇಡಿಕೆಯಾಗಿದೆ. ಒಂದು ವೇಳೆ, ಈ ಬೇಡಿಕೆಯನ್ನು ಕೇಂದ್ರ ಸರ್ಕಾರವು ಈಡೇರಿಸಿದರೆ, ಕೇರಳದಿಂದ ಬಿಜೆಪಿಯ ಮೊದಲ ಸಂಸದರನ್ನು ಆಯ್ಕೆ ಮಾಡಲು ಸಹಜವಾಗಿಯೇ ಚರ್ಚ್ ನೆರವು ನೀಡಲಿದೆ ಎಂದು ಬಿಷಪ್ ಹೇಳಿದ್ದಾರೆ.
ಇದನ್ನೂ ಓದಿ: BJP Master Plan In Kerala: ಕೇರಳದಲ್ಲಿ ಕ್ರೈಸ್ತರು, ಮುಸ್ಲಿಮರ ಮತ ಸೆಳೆಯಲು ಬಿಜೆಪಿ ಮಾಸ್ಟರ್ ಪ್ಲಾನ್, ಏನಿದು ರಣತಂತ್ರ?
ಬಿಷಪ್ ಅವರ ಈ ಹೇಳಿಕೆಗೆ ಸಿಪಿಎಂ ಮತ್ತು ಕಾಂಗ್ರೆಸ್ ಟೀಕಿಸಿವೆ. ಇದೇ ವೇಳೆ, ಬಿಜೆಪಿಯು ಈ ಹೇಳಿಕೆಯನ್ನು ಸ್ವಾಗತಿಸಿದೆ. ಯಾರೂ ನರಿಯ ಜೊತೆ ಕೋಳಿ ಸಾಕುವುದಿಲ್ಲ. ಚರ್ಚ್ ಹಿಂದೂ ರಾಷ್ಟ್ರದ ನಾಯಕರನ್ನು ಹೇಗೆ ಬೆಂಬಲಿಸುತ್ತದೆ? ಎಂದು ಸ್ಥಳೀಯ ಸ್ವ ಆಡಳಿತ ಸಚಿವ ಎಂ ಬಿ ರಾಜೇಶ್ ಅವರು ಬಿಷಪ್ ಅವರನ್ನು ಪ್ರಶ್ನಿಸಿದ್ದಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಚರ್ಚ್ ಮತ್ತು ಪಾದ್ರಿಗಳ ವಿರುದ್ಧ ನಡೆದ ದಾಳಿಯ ಬಗ್ಗೆ ಬಿಷಪ್ ಮರೆತಿದ್ದಾರೆ. ಯಾವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. ಬಿಷಪ್ ಅವರ ಹೇಳಿಕೆ, ಕೇರಳದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.