ತಿರುವನಂತಪುರಂ: ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ (Artificial Intelligence) ತೆರೆದುಕೊಳ್ಳುತ್ತಿವೆ. ಎಐ ಆಧಾರಿತ ರೋಬೊಗಳು (Robots) ಹೋಟೆಲ್‌ಗಳಲ್ಲಿ ಸರ್ವ್ ಮಾಡುತ್ತಿವೆ. ಎಐ ಆ್ಯಂಕರ್‌ಗಳು ಚಾನೆಲ್‌ಗಳಲ್ಲಿ ಸುದ್ದಿ ಓದುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳು ಕೋಡ್ ರಚನೆ, ಕವನ, ಪ್ರಬಂಧ ರಚನೆಯಲ್ಲೂ ಸೈ ಎನಿಸಿಕೊಂಡಿವೆ. ಇದರ ಬೆನ್ನಲ್ಲೇ, ಕೇರಳದ (Kerala) ಶಾಲೆಯೊಂದು ಕೃತಕ ಬುದ್ಧಿಮತ್ತೆ ಆಧಾರಿತ ರೋಬೊ ಟೀಚರ್‌ಅನ್ನು (AI Teacher) ಪರಿಚಯಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಹೌದು, ಮೇಕರ್‌ಲ್ಯಾಬ್ಸ್ ಎಜುಟೆಕ್ (Makerlabs Edutech) ಎಂಬ ಸಂಸ್ಥೆಯ ಸಹಯೋಗದಲ್ಲಿ ದೇಶದ ಮೊದಲ ಎಐ ಆಧಾರಿತ ರೋಬೊ ಟೀಚರ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಐರಿಸ್ (Iris) ಎಂದು ಹೆಸರಿಡಲಾಗಿದೆ. ಕಡುವಾಯಿಲ್ ಥಂಗಲ್ ಚಾರಿಟೇಬಲ್ ಟ್ರಸ್ಟ್ ಮುತುವರ್ಜಿ ವಹಿಸಿ, ತಿರುವನಂತಪುರಂನಲ್ಲಿರುವ ಕೆಟಿಸಿಟಿ ಸೆಕೆಂಡರಿ ಸ್ಕೂಲ್‌ನಲ್ಲಿ ಎಐ ಆಧಾರಿತ ರೋಬೊ ಟೀಚರ್‌ಅನ್ನು ಅಳವಡಿಸಿಕೊಳ್ಳಲಾಗಿದೆ. ಶಾಲೆಗಳಲ್ಲಿ ಇತರ ಚಟುವಟಿಕೆಗಳಿಗೂ ಉತ್ತೇಜನ ನೀಡುವ ದಿಸೆಯಲ್ಲಿ 2021ರಲ್ಲಿ ನೀತಿ ಆಯೋಗ ಜಾರಿಗೆ ತಂದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯ ನೆರವು ಕೂಡ ಇದರ ಭಾಗವಾಗಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ರೋಬೊ ಟೀಚರ್ ಶಾಲೆಯ ತರಗತಿ ಕೋಣೆಗೆ ಆಗಮಿಸುತ್ತಲೇ ವಿದ್ಯಾರ್ಥಿಗಳು ಪುಳಕಿತರಾಗಿದ್ದಾರೆ. ಗುಡ್ ಮಾರ್ನಿಂಗ್ ಮಿಸ್ ಎಂದು ವಿಶ್ ಮಾಡಿದ್ದಾರೆ. ರೋಬೊ ಟೀಚರ್ ಕೂಡ ಅಷ್ಟೇ, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜತೆಗೆ, ಅವರ ಬಳಿ ತೆರಳಿ, ಪರಿಚಯ ಮಾಡಿಕೊಂಡು, ವಿದ್ಯಾರ್ಥಿಗಳ ಹೆಸರು ಕೇಲಿ, ಕೈಕುಲುಕಿದೆ. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇನ್ನು, ದೇಶದಲ್ಲಿಯೇ ಮೊದಲ ಬಾರಿಗೆ ಎಐ ಆಧಾರಿತ ರೋಬೊ ಟೀಚರ್ ಅಳವಡಿಸಿಕೊಂಡ ಮೊದಲ ಶಾಲೆ ಎಂಬ ಖ್ಯಾತಿಗೆ ಕೆಟಿಸಿಟಿ ಸೆಕೆಂಡರಿ ಸ್ಕೂಲ್ ಭಾಜನವಾಗಿದೆ.
ಇದನ್ನೂ ಓದಿ: ಲೇಡಿ ರಿಪೋರ್ಟರ್ ಕಂಡು ಟಚ್ ಮಾಡಿದ ಪುರುಷ ರೋಬೊ; Men Will Be Men ವಿಡಿಯೊ ಇದು
ಎಐ ಟೀಚರ್‌ನ ವೈಶಿಷ್ಟ್ಯವೇನು?
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ರೋಬೊ ಟೀಚರ್ ಬಹುಮುಖಿ ಪ್ರತಿಭೆಯಾಗಿದೆ. ಇವರು ಬಹುಭಾಷೆಗಳಲ್ಲಿ ಬೋಧನೆ ಮಾಡುತ್ತಾರೆ. ವಿದ್ಯಾರ್ಥಿಗಳು ಕೇಳುವ ಯಾವುದೇ ಜಟಿಲ ಸಮಸ್ಯೆಯನ್ನೂ ಬಗೆಹರಿಸುತ್ತಾರೆ. ಯಾವ ವಿಷಯದ ಬಗ್ಗೆಯೂ ಬೋಧನೆ ಮಾಡುತ್ತಾರೆ. ವ್ಹೀಲ್ಸ್ ಮೂಲಕ ತರಗತಿ ಕೋಣೆಯ ತುಂಬ ಸುತ್ತಾಡಿ, ನಮ್ಮ ಮೇಷ್ಟ್ರು ರೀತಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡುತ್ತಾರೆ. ಹಾಗಾಗಿ, ಈ ರೋಬೊ ಟೀಚರ್ ಬಗ್ಗೆ ವಿದ್ಯಾರ್ಥಿಗಳೂ ಹೆಚ್ಚು ಕುತೂಹಲ ಹೊಂದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ