ತಿರುವನಂತಪುರಂ: ಕೇರಳದ ಶಾಲೆಗಳಲ್ಲಿ (Kerala Schools) ಇನ್ನು ಮುಂದೆ ಶಿಕ್ಷಕರನ್ನು ಸರ್, ಮೇಡಂ ಎಂದು ಸಂಬೋಧಿಸುವಂತಿಲ್ಲ. ಎಲ್ಲರನ್ನೂ ಏಕ ರೂಪವಾಗಿ ‘ಟೀಚರ್ʼ ಎಂದೇ ಕರೆಯಬೇಕು. ಹೀಗೆಂದು ಕೇರಳದ ಮಕ್ಕಳ ಹಕ್ಕು ರಕ್ಷಣೆ ಆಯೋಗ ಶಿಕ್ಷಕ ಇಲಾಖೆಗೆ ಸೂಚಿಸಿದೆ.
ಸರ್, ಮೇಡಂ ಎಂದು ಕರೆಯುವುದರಿಂದ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಸಮಾನತೆ ಉಳಿಯುವುದಿಲ್ಲ. ಬದಲಾಗಿ ಟೀಚರ್ ಎಂದು ಸಂಬೋಧಿಸಿದಾಗ ಎಲ್ಲ ಶಿಕ್ಷಕರು ಒಂದೇ ಎನ್ನುವ ಸಮಾನತೆ ಮೂಡುತ್ತದೆ. ಅದಷ್ಟೇ ಅಲ್ಲದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವೂ ಗಟ್ಟಿಯಾಗುತ್ತದೆ ಎಂದು ಆಯೋಗವು ತಿಳಿಸಿದೆ. ʼಸರ್ʼ, ʼಮೇಡಂʼ ಸಂಬೋಧನೆಯನ್ನು ನಿಲ್ಲಿಸಬೇಕು ಎಂದು ಹೇಳಿ ಅರ್ಜಿದಾರರೊಬ್ಬರು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅದೇ ಹಿನ್ನೆಲೆ ಆಯೋಗ ಈ ಸೂಚನೆ ನೀಡಿದೆ.
ಇದನ್ನೂ ಓದಿ: ಕೇರಳದಲ್ಲಿ ಒಂದರ ಬೆನ್ನಿಗೆ ಒಂದರಂತೆ ಫುಡ್ ಪಾಯ್ಸನ್ ಕೇಸ್ಗಳು; ಬಿರ್ಯಾನಿ ತಿಂದ 20 ವರ್ಷದ ಯುವತಿ ಸಾವು
ಈ ಹಿಂದೆ 2021ರಲ್ಲಿ ಪಾಲಕ್ಕಾಡು ಜಿಲ್ಲೆಯ ಮಥುರ್ ಗ್ರಾಮ ಪಂಚಾಯಿತಿಯು ಕಚೇರಿಯಲ್ಲಿ ʼಸರ್ʼ, ʼಮೇಡಂʼ ಸಂಬೋಧನೆಯನ್ನು ನಿಲ್ಲಿಸಿತ್ತು. ಆ ರೀತಿ ಸಂಬೋಧನೆ ಮಾಡುವುದರಿಂದ ಜನ ಸಾಮಾನ್ಯರು ಮತ್ತು ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಅಂತರ ಬೆಳೆಯುತ್ತದೆ ಎಂದು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಪಿ.ಆರ್.ಪ್ರಸಾದ್ ಅವರು ಹೇಳಿದ್ದರು.