Site icon Vistara News

Kochi Blast : ಕೇರಳ ಸ್ಫೋಟದ ಆರೋಪಿ ಶರಣಾಗತಿ; ಸಾವಿನ ಸಂಖ್ಯೆ 2ಕ್ಕೆ ಏರಿಕೆ

kerala bomb blast

ಕೊಚ್ಚಿ: ಕೇರಳದ ಎರ್ನಾಕುಲಂನಲ್ಲಿ (Kochi Blast) ಭಾನುವಾರ ನಡೆದ ಜೆಹೊವಾಹ್ ವಿಟ್ನೆಸಸ್ ಸಮಾವೇಶದಲ್ಲಿ ನಡೆದ ಸರಣಿ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡು ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾನೆ. ಕ್ರಿಶ್ಚಿಯನ್ ಪಂಥವನ್ನು ಗುರಿಯಾಗಿಸಲು ಏಕೆ ನಿರ್ಧರಿಸಿದೆ ಎಂಬುದನ್ನು ವಿವರಿಸಿದ್ದಾನೆ. ಇದೇ ವೇಳೆ ಘಟನೆಯಲ್ಲಿ ಮೃತಪಟ್ಟವರು ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ಆರೋಪಿ ಡೊಮಿನಿಕ್ ಮಾರ್ಟೀನ್ ಕೂಡಾ ಜೆಹೊವಾಹ್ ವಿಟ್ನೆಸಸ್ ಗುಂಪಿನ ಸದಸ್ಯ ಎಂದು ತಿಳಿದು ಬಂದಿದೆ. ಈತ ತನ್ನದೇ ಸಮುದಾಯದ ಜೆಹೊವಾಹ್ ವಿಟ್ನೆಸಸ್ ಕೇಂದ್ರದ ಪ್ರಾರ್ಥನಾ ಮಂದಿರಕ್ಕೆ ಟಿಫಿನ್ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕ ಕೊಂಡೊಯ್ದು ಇಟ್ಟು ಬಂದಿದ್ದ ಎಂದು ತಿಳಿದು ಬಂದಿದೆ. ಆರೋಪಿ ಡೊಮಿನಿಕ್ ಮಾರ್ಟೀನ್ ತನ್ನ ಕೃತ್ಯವನ್ನು ಸಾಬೀತುಪಡಿಸಲು ಪೊಲೀಸರಿಗೆ ಸಾಕ್ಷ್ಯವನ್ನೂ ಕೊಟ್ಟಿದ್ದಾನೆ!

ವೀಡಿಯೊದಲ್ಲಿ, ಮಾರ್ಟಿನ್​, ತಾನು ಜೆಹೊವಾಹ್ ವಿಟ್ನೆಸಸ್ ಬೋಧನೆಗಳನ್ನು ಒಪ್ಪುವುದಿಲ್ಲ. ಅವರ ಚಟುವಟಿಕೆಗಳನ್ನು ನಿಲ್ಲಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಅವರ ವಿಚಾರಗಳು ದೇಶಕ್ಕೆ ಅಪಾಯಕಾರಿ ಮತ್ತು ಅವರು “ಯುವ ಮನಸ್ಸುಗಳಿಗೆ ವಿಷವನ್ನು ನೀಡುತ್ತಿದ್ದಾರೆ ” ಎಂದು ಶಂಕಿತ ಆರೋಪಿ ಪ್ರತಿಪಾದಿಸಿದ್ದಾನೆ. ಮಾರ್ಟಿನ್ ತಾನು ವರ್ಷಗಳ ಹಿಂದೆ ಜೆಹೊವಾಹ್ ವಿಟ್ನೆಸಸ್ ಗುಂಪಿನೊಂದಿಗೆ ಇದ್ದೆ ಎಂಬುದಾಗಿಯೂ ಇದೇ ವೇಳೆ ಮಾರ್ಟಿನ್​ ಹೇಳಿಕೊಂಡಿದ್ದಾನೆ.

ವಿಡಿಯೊದಲ್ಲಿ ಏನಿದೆ?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 6 ನಿಮಿಷಗಳ ವೀಡಿಯೊದಲ್ಲಿ, ಮಾರ್ಟಿನ್, “ನಾನು ಸ್ಫೋಟದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅಲ್ಲಿ ಸ್ಫೋಟವನ್ನು ನಡೆಸಿದ್ದು ನಾನೇ ಎಂದಿದ್ದಾನೆ.

ತನ್ನ ಉದ್ದೇಶವನ್ನು ವಿವರಿಸಿದ ಆತ “ಆರು ವರ್ಷಗಳ ಹಿಂದೆ, ಜೆಹೊವಾಹ್ ವಿಟ್ನೆಸಸ್ ತಪ್ಪು ಹಾದಿಯಲ್ಲಿದೆ ಮತ್ತು ಅವರ ಬೋಧನೆಗಳು ರಾಷ್ಟ್ರ ವಿರೋಧಿಯಾಗಿವೆ ಎಂದು ನಾನು ಅರಿತುಕೊಂಡೆ. ಅದನ್ನು ಸರಿಪಡಿಸುವಂತೆ ನಾನು ಅವರನ್ನು ಹಲವಾರು ಬಾರಿ ಕೇಳಿದೆ. ಆದಾಗ್ಯೂ, ಅವರು ಅದನ್ನು ಮಾಡಲು ಎಂದಿಗೂ ಸಿದ್ಧರಿರಲಿಲ್ಲ ಎಂದಿದ್ದಾನೆ.

ಈ ಸುದ್ದಿಯನ್ನೂ ಓದಿ : Rajnath Singh : ರಾಮಜನ್ಮಭೂಮಿ ಸಿಖ್ಖರ ಕೊಡುಗೆ; ರಕ್ಷಣಾ ಸಚಿವರ ಹೇಳಿಕೆಯ ಹಿನ್ನೆಲೆಯೇನು?

“ನಂಬಿಕೆಯನ್ನು ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರು ಕಲಿಸುವುದೇನೆಂದರೆ, ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಾಶವಾಗುತ್ತಾರೆ. ಅವರು ಮಾತ್ರ ಬದುಕುವುದನ್ನು ಮುಂದುವರಿಸುತ್ತಾರೆ. 850 ಕೋಟಿ ಜನರ ಅಂತ್ಯವನ್ನು ಬಯಸುವ ಗುಂಪಿನ ಬಗ್ಗೆ ನಾವು ಏನು ಮಾಡಬೇಕು?. ನನಗೆ ಬೇರೆ ದಾರಿ ಕಾಣಲಿಲ್ಲ. ಈ ತಪ್ಪು ಸಿದ್ಧಾಂತದ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿರುವುದರಿಂದ ನಾನು ಪ್ರತಿಕ್ರಿಯಿಸಲು ನಿರ್ಧರಿಸಿದೆ ” ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

“ಈ ದೇಶದಲ್ಲಿ ವಾಸಿಸುತ್ತಿರುವ ಅವರು ಇಲ್ಲಿನ ಇಡೀ ದೇಶದ ಜನರನ್ನು ವೇಶ್ಯೆಯರು ಮತ್ತು ನಿರ್ಗತಿಕರು ಎಂದು ಕರೆಯುವ ಮೂಲಕ ಅವಮಾನಿಸುತ್ತಾರೆ. ಇತರರೊಂದಿಗೆ ಕೈ ಜೋಡಿಸಬೇಡಿ ಮತ್ತು ಅವರೊಂದಿಗೆ ಆಹಾರವನ್ನು ಸೇವಿಸಬೇಡಿ ಎಂದು ಅವರು ಹೇಳುತ್ತಾರೆ. ಇದು ತಪ್ಪು ಸಿದ್ಧಾಂತ ಎಂದು ನಾನು ಅರಿತುಕೊಂಡೆ” ಎಂದು ರ್ಟಿನ್ ವಿವರಿಸಿದ್ದಾನೆ.

ವಯಸ್ಕರಿಗೆ ಮತ ಚಲಾಯಿಸದಂತೆ ಮತ್ತು ಮಿಲಿಟರಿ ಸೇವೆಗಳಿಗೆ ಸೇರದಂತೆ ಈ ಗುಂಪು ಕೇಳಿಕೊಳ್ಳುತ್ತದೆ ಎಂದು ಮಾರ್ಟಿನ್​ ಆರೋಪಿಸಿದ್ದಾನೆ. “ಅಪಾಯಕಾರಿ ಆಲೋಚನೆಗಳನ್ನು ಹರಡುತ್ತಿರುವ ಈ ರೀತಿಯ ಗುಂಪುಗಳನ್ನು ನಿಯಂತ್ರಿಸದಿದ್ದರೆ, ನನ್ನಂತಹ ಜನರು ಜೀವಗಳನ್ನು ತ್ಯಾಗ ಮಾಡಬೇಕಾಗುತ್ತದೆ” ಎಂದು ಮಾರ್ಟಿನ್ ಹೇಳಿದ್ದಾನೆ.

ಡೊಮಿನಿಕ್ ಮಾರ್ಟಿನ್ ಶರಣಾಗಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ಅವನನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟದ ಹಿಂದೆ ಆತನ ಕೈವಾಡವಿದೆಯೇ ಎಂಬುದನ್ನು ಪೊಲೀಸರು ಈವರೆಗೆ ದೃಢಪಡಿಸಿಲ್ಲ.

ಜೆಹೊವಾಹ್ ವಿಟ್ನೆಸಸ್ ಅನ್ನೋದು ಕ್ರೈಸ್ತರ ಒಂದು ಗುಂಪು. ಇದರ ಮೂಲ ಅಮೆರಿಕ ದೇಶ. 19ನೇ ಶತಮಾನದಲ್ಲಿ ಈ ಗುಂಪು ಹುಟ್ಟಿಕೊಂಡಿತ್ತು. ಆರೋಪಿ ಡೊಮಿನಿಕ್ ಮಾರ್ಟೀನ್ ಇದೇ ಗುಂಪಿನ ಸದಸ್ಯ. ಈತ ತನ್ನದೇ ಗುಂಪಿನ ಮೇಲೆ ಏಕೆ ಬಾಂಬ್ ದಾಳಿ ನಡೆಸಿದ ಅನ್ನೋದ್ರ ಕುರಿತಾಗಿ ಇನ್ನಷ್ಟೇ ಪೊಲೀಸರಿಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

Exit mobile version