Site icon Vistara News

Delhi University | ಲುಂಗಿ ಧರಿಸಿದ್ದಕ್ಕೆ ಕೇರಳದ 4 ವಿದ್ಯಾರ್ಥಿಗಳಿಗೆ ಎಬಿವಿಪಿ ಥಳಿತ! ಎಸ್ಎಫ್ಐ ಆರೋಪ

Keral Students

ನವದೆಹಲಿ: ಲುಂಗಿ ಧರಿಸಿದ್ದೇಕೆ ಎಂದು ಪ್ರಶ್ನಿಸಿ ಕೇರಳದ ನಾಲ್ವರು ವಿದ್ಯಾರ್ಥಿಗಳ (Kerala Student) ಮೇಲೆ ಹಲ್ಲೆ ಮಾಡಿದ ಘಟನೆ ದಿಲ್ಲಿ ವಿಶ್ವವಿದ್ಯಾಲಯದಲ್ಲಿ (Delhi University) ನಡೆದಿದೆ. ಈ ಘಟನೆಯನ್ನು ಖಂಡಿಸಿ ಕೇರಳದ ರಾಜ್ಯಸಭೆ ಸದಸ್ಯ ಎ ಎ ರಹೀಮ್ (A A Rahim) ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದಾರೆ.

ಕೇರಳ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿರುವ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(ಎಸ್ಎಫ್ಐ), ಎಬಿವಿಪಿ(ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ಗೂಂಡಾಗಳು ದಿಲ್ಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜ್ ಮುಂದೆ ಕೇರಳದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳು ಲುಂಗಿ ಧರಿಸಿಕೊಂಡು ತಮ್ಮ ರೂಮ್‌ಗಳಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೂವರು ಮಂದಿ ಬೈಕ್ ಮೇಲೆ ಬಂದು, ನೀವೇ ಲುಂಗಿ ಏಕೆ ಧರಿಸಿದ್ದೀರಿ? ಇಂಥದ್ದೆಲ್ಲ ಧರಿಸಿಕೊಂಡು ತಿರುಗಾಡುವ ಸ್ಥಳ ಇದಲ್ಲ ಎಂದು ಅವರನ್ನು ಥಳಿಸಿದ್ದಾರೆ. ಬೆಲ್ಟ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿದೆ.

ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಪತ್ರ ಬರೆದಿರುವ ಸಂಸದ ಎ ಎ ರಹೀಮ್, ಮತ್ತೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ವೈವಿಧ್ಯತೆಯನ್ನು ಗೌರವಿಸುವ ಸ್ಥಳವನ್ನಾಗಿ ದಿಲ್ಲಿ ವಿಶ್ವವಿದ್ಯಾಲಯ ಬದಲಾಗಬೇಕು ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ, ಪ್ರಮುಖ ವಿಶ್ವವಿದ್ಯಾಲಯದಲ್ಲಿ ಈ ರೀತಿಯ ದ್ವೇಷ ಪ್ರಕರಣಗಳು ನಡೆಯುತ್ತಿರುವುದು ನಾಚಿಕೆಗೇಡು. ಈ ಘಟನೆಯ ಬಗ್ಗೆ ಪೂರ್ಣ ತನಿಖೆ ಮಾಡಿ, ನ್ಯಾಯ ಒದಗಿಸಬೇಕು ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ | ಮೆಡಿಕಲ್‌ ಕಾಲೇಜಿನಲ್ಲಿ ಸ್ಟೀಲ್‌ ರಾಡ್‌ನಿಂದ ವಿದ್ಯಾರ್ಥಿ ಹಲ್ಲೆ, ಇಬ್ಬರಿಗೆ ಗಾಯ

Exit mobile version