ತಿರುವನಂತಪುರಂ, ಕೇರಳ: ಮೂರು ಜನರನ್ನು ಬಲಿಪಡೆದುಕೊಂಡ ಕೇರಳ ರೈಲು ಬೆಂಕಿ ಪ್ರಕರಣದ ವಿಚಾರಣೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಹೊತ್ತುಕೊಂಡಿದೆ. ಈ ತಿಂಗಳ ಆರಂಭದಲ್ಲಿ ನಡೆದ ಈ ಘಟನೆಯು ಉಗ್ರ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ಕೃತ್ಯಗಳ ತನಿಖೆ ನಡೆಸುವ ಎನ್ಐಎ ಈ ಪ್ರಕರಣದ ತನಿಖೆಯನ್ನು ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ(Kerala train fire).
ಎನ್‌ಐಎ ಕೊಚ್ಚಿ ಘಟಕವು ಈ ಪ್ರಕರಣದ ವಿಚಾರಣೆ ನಡೆಸಲಿದೆ. ಕೇರಳ ಪೊಲೀಸ್ ವಿಶೇಷ ತನಿಖಾ ತಂಡದಿಂದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ. ಕೇರಳದ ರೈಲು ಬೆಂಕಿ ಪ್ರಕರಣದ ಆರೋಪಿ, 27 ವರ್ಷದ ದಿಲ್ಲಿ ನಿವಾಸಿ ಶಾರುಖ್ ಸೈಫಿ ವಿರುದ್ಧ ಕೇರಳ ಪೊಲೀಸರು ಕಾನೂನು ಬಾಹಿರ ಚಟುವಟಿಕೆ ತಡೆ(uapa) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ದೆಹಲಿಯ ಶಾಹೀನ್ ಬಾಗ್‌ನಲ್ಲಿ ತನ್ನ ತಂದೆಯೊಂದಿಗೆ ಬಡಗಿಯಾಗಿ ಕೆಲಸ ಮಾಡುತ್ತಿದ್ದ ಶಾರುಖ್ ಸೈಫಿ ತೀವ್ರಗಾಮಿಯಾಗಿದ್ದಾನೆ. ವಿವಾದಾತ್ಮಕ ಬೋಧಕ ಜಾಕಿರ್ ನಾಯ್ಕ್ ಮತ್ತು ಇತರರ ಭಾಷಣಗಳ ವಿಡಿಯೋಗಳನ್ನು ಆತನ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಟಿ ಹೇಳಿದೆ. ಕೇರಳ ರೈಲಿಗೆ ಬೆಂಕಿ ಹಚ್ಚಿದ ಘಟನೆಯ ಹಿಂದಿನ ಉದ್ದೇಶ ಮತ್ತು ಇತರ ಉಗ್ರರರೊಂದಿಗೆ ಆತನ ಸಂಪರ್ಕಗಳ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ದೊರೆತಿಲ್ಲ ಎನ್ನಲಾಗಿದೆ.
ಏಪ್ರಿಲ್ 2ರಂದು ಏನು ನಡೆಯಿತು?
ಆಲಪ್ಪುರ- ಕಣ್ಣೂರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಶಾರುಕ್ ಸೈಫಿ, ಏ.2ರ ಭಾನುವಾರ ರಾತ್ರಿ 9.45ರ ಸುಮಾರಿಗೆ ಕೋರಾಪುಳ ಸೇತುವೆಯಲ್ಲಿ ರೈಲಿನ ಬೋಗಿಯಲ್ಲಿದ್ದ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೋಗಿಯಿಂದ ನೆಗೆದು ಪರಾರಿಯಾಗಿದ್ದ. ಇದರಿಂದ ಎಂಟು ಮಂದಿ ಸುಟ್ಟ ಗಾಯಗಳಿಗೀಡಾಗಿದ್ದರು.
ಇದನ್ನೂ ಓದಿ: NIA Chargesheet: ಪಿಎಫ್ಐ ವಿರುದ್ಧ ಎನ್ಐಎ 5ನೇ ಚಾರ್ಜ್‌ಶೀಟ್, 12 ಮಂದಿ ವಿರುದ್ಧ ಆರೋಪ
ಕೆಲವು ಗಂಟೆಗಳ ಬಳಿಕ, ರೈಲು ಹಳಿಗಳ ಮೇಲೆ ಇದೇ ರೈಲಿನ ಪ್ರಯಾಣಿಕರಾಗಿದ್ದ ಮೂವರ ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ಇವರಲ್ಲಿ ಒಬ್ಬಾಕೆ ಮಹಿಳೆ, ಒಬ್ಬ ಪುರುಷ ಹಾಗೂ ಒಂದು ಮಗುವಾಗಿತ್ತು. ಬೆಂಕಿ ಹಚ್ಚಿದ ಸಂದರ್ಭದಲ್ಲಿ ಭಯಭೀತರಾದ ಇವರು ರೈಲಿನಿಂದ ನೆಗೆದ ಪರಿಣಾಮ ಸತ್ತಿರಬಹುದು ಎಂದು ಶಂಕಿಸಲಾಗಿತ್ತು.