ತಿರುವನಂತಪುರಂ: ಕೇರಳದಲ್ಲಿ ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಿ, ಮೂವರನ್ನು ಕೊಂದ ಪ್ರಕರಣದಲ್ಲಿ ಬಂಧಿತನಾಗಿರುವ ಶಾರುಖ್ ಸೈಫಿಯು ಇಸ್ಲಾಮಿಕ್ ಮೂಲಭೂತವಾದಿ ಜಾಕೀರ್ ನಾಯ್ಕ್‌ನ ಕಟ್ಟಾ ಅನುಯಾಯಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ಲಾಮಿಕ್ ಮೂಲಭೂತವಾದವನ್ನೇ ತುಂಬಿಕೊಂಡಿದ್ದ ಆತ, ಗೆಳೆಯರ ಎದುರು ದ್ವೇಷ ಭಾಷಣ ಮಾಡುತ್ತಿದ್ದ. ಇದೇ ಹಿನ್ನೆಲೆಯಲ್ಲಿ ಆತ ರೈಲಿಗೆ ಬೆಂಕಿ (Kerala Train Fire) ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.
“ಶಾರುಖ್ ಸೈಫಿಯು ವಿವಾದಿತ ಧರ್ಮ ಬೋಧಕ ಜಾಕೀರ್ ನಾಯ್ಕ್‌ನ ಅನುಯಾಯಿಯಾಗಿದ್ದಾನೆ. ಆತ ನಿತ್ಯವೂ ಜಾಕೀರ್ ನಾಯ್ಕ್‌ನ ವಿಡಿಯೊಗಳನ್ನು ನೋಡುತ್ತಿದ್ದ. ಗೆಳೆಯರ ಹತ್ತಿರ ಮೂಲಭೂತವಾದದ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದ. ಕೊನೆಗೆ ಆತನೂ ಮೂಲಭೂತವಾದಿಯಾಗಿ ಪರಿವರ್ತನೆಗೊಂಡಿದ್ದಾನೆ” ಎಂದು ಕೇರಳ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾಹಿತಿ ನೀಡಿದರು.
“ದೆಹಲಿ ನಿವಾಸಿಯಾದ ಶಾರುಖ್ ಸೈಫಿಯು ಮೂಲಭೂತವಾದವನ್ನೇ ತಲೆಯಲ್ಲಿ ಇಟ್ಟುಕೊಂಡಿದ್ದಾನೆ. ಜಾಕೀರ್ ನಾಯ್ಕ್ ಹಾಗೂ ಅಹ್ಮದ್‌ಗೆ ಆತ ಅನುಯಾಯಿಯಾಗಿದ್ದಾನೆ. ಆದರೆ, ಪ್ರಕರಣದಲ್ಲಿ ಆತ ಬೇರೆಯವರ ಸಹಾಯ ಪಡೆದು, ರೈಲಿಗೆ ಬೆಂಕಿಹಚ್ಚಿರುವ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಲೆಂದೇ ಆತ ರೈಲು ಹತ್ತಿದ್ದ. ಪ್ರಕರಣದ ಕುರಿತು ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು. ಹಾಗೆಯೇ, ಶಾರುಖ್ ಸೈಫಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 2ರಂದು ಆಲಪ್ಪುಳ-ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಚಲಿಸುತ್ತಿದ್ದ ಶಾರುಖ್ ಸೈಫಿ ರೈಲಿಗೆ ಬೆಂಕಿ ಹಚ್ಚಿದ್ದ. ಇದರಿಂದಾಗಿ ಒಂದು ಮಗು ಸೇರಿ ಮೂವರು ಅಗ್ನಿಗೆ ಆಹುತಿಯಾಗಿದ್ದರು. ಒಂಬತ್ತು ಜನರಿಗೆ ಸುಟ್ಟ ಗಾಯಗಳಾಗಿವೆ. ಇದಾದ ಬಳಿಕ ಏಪ್ರಿಲ್ 4ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪೊಲೀಸರು ಸೈಫಿಯನ್ನು ಬಂಧಿಸಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿ ಜಾಕೀರ್ ನಾಯ್ಕ್
ಇಸ್ಲಾಮಿಕ್ ರಿಸರ್ಚ್ ಎಂಬ ಫೌಂಡೇಷನ್ ಸ್ಥಾಪಿಸಿದ ಜಾಕೀರ್ ನಾಯ್ಕ್, ವಿವಾದಿತ ಭಾಷಣಗಳಿಂದಲೇ ಖ್ಯಾತಿಯಾಗಿದ್ದ. ಹಿಂದುಗಳು, ಹಿಂದು ದೇವರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2016ರಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್‌ಅನ್ನು ನಿಷೇಧಿಸಿತ್ತು. ಹಾಗೆಯೇ, 2022ರ ಕೇಂದ್ರ ಸರ್ಕಾರವು ಜಾಕೀರ್ ನಾಯ್ಕ್‌ನ ಸಂಘಟನೆಯನ್ನು 5 ವರ್ಷ ನಿಷೇಧ ಹೇರಿದೆ.
ಇದನ್ನೂ ಓದಿ: Fire in Train: ಕೇರಳದ ರೈಲಿನಲ್ಲಿ ಬೆಂಕಿ ಹಚ್ಚಿದ ದುಷ್ಕರ್ಮಿಯ ಗುರುತು ಪತ್ತೆ, ಎನ್‌ಐಎ ಭೇಟಿ
ಪ್ರತಿ ಮುಸ್ಲಿಮನೂ ಹತ್ಯಾರ ಹೊಂದಬೇಕು, ಉಗ್ರಗಾಮಿಯಾಗಬೇಕು ಎಂಬುದಾಗಿ ಬೋಧಿಸುತ್ತಿದ್ದ ಈತ ಭಾರತದಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಬಳಿಕ ಮಲೇಷ್ಯಾದಲ್ಲಿ ಮೊದಲು ಕಾಣಿಸಿಕೊಂಡಿದ್ದ. ಈತ ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅತಿಥಿಯಾಗಿ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದ. ಈತನನ್ನು ಕತಾರ್ ಸರ್ಕಾರವೇ ಆಹ್ವಾನಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಈಗ ಈತನನ್ನು ಭಾರತಕ್ಕೆ ಕರೆತರಲು ಗುಪ್ತಚರ ಇಲಾಖೆ ಅಧಿಕಾರಿಗಳು, ರಾಯಭಾರ ಕಚೇರಿ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.