Site icon Vistara News

Kerala Train Fire : ಬೋಗಿಗೆ ಬೆಂಕಿ ಹಚ್ಚಿ 3 ಜನರ ಕೊಂದ ಆರೋಪಿ ಸೆರೆ, ಪೊಲೀಸರ ಕಾರ್ಯಾಚರಣೆ ಹೇಗಿತ್ತು?

Kerala train fire incident will be probed by NIA

ನವದೆಹಲಿ: 3 ಜನರ ಸಾವಿಗೆ ಕಾರಣವಾದ ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಕೇರಳ ರೈಲು ಬೆಂಕಿ ಪ್ರಕರಣದಲ್ಲಿ ಮೂವರ ಸಾವು ಮಾತ್ರವಲ್ಲದೇ 9 ಜನರು ಗಾಯಗೊಂಡಿದ್ದರು. ಏಪ್ರಿಲ್ 4 ರಾತ್ರಿ ಮಹಾರಾಷ್ಟ್ರದ ರತ್ನಾಗಿರಿ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಶಾರುಖ್ ಸೈಫಿಯನ್ನು ಪೊಲೀಸರು ಬಂಧಿಸಿದ್ದಾರೆ(Kerala train Fire).

ಕೊಯಿಕ್ಕೋಡ್‌ನಲ್ಲಿ ಅಳಪುಳಾ- ಕಣ್ಣೂರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಮಂಗಳವಾರ ಆತ ರತ್ನಾಗಿರಿಯಲ್ಲಿದ್ದಾನೆಂಬ ಲೊಕೇಷನ್ ಪತ್ತೆಯಾಗಿತ್ತು. ರೈಲಿಗೆ ಬೆಂಕಿ ಹಚ್ಚಿ ಅಲ್ಲಿಂದ ಕೆಳಗೆ ಜಿಗಿಯುವಾಗ ಆತನ ತಲೆಗೆ ಗಾಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯಲು ಆತ ರತ್ನಾಗಿರಿ ಜಿಲ್ಲಾಸ್ಪತ್ರೆಗೆ ತೆರಳಿದ್ದ. ಆದರೆ, ಅಲ್ಲಿ ಪೂರ್ತಿ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಪರಾರಿಯಾಗಿದ್ದ. ಬಳಿಕ ರತ್ನಾಗಿರಿಯಲ್ಲಿ ಆತನಿಗಾಗಿ ತೀವ್ರ ಶೋಧ ನಡೆಸಲಾಯಿತು ಕೊನೆಗೆ ಆತ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯಕ್ಕೆ ರತ್ನಾಗಿರಿ ಆರ್‌ಪಿಎಫ್ ವಶದಲ್ಲಿರುವ ಆತನನ್ನು ಕೇರಳ ಪೊಲೀಸರು ಶೀಘ್ರವೇ ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ.

Kerala Train Fire: ಏನಿದು ಕೇರಳ ರೈಲು ಬೆಂಕಿ ಪ್ರಕರಣ?

ಕೇರಳದ ಕೋಯಿಕ್ಕೋಡ್‌ನಲ್ಲಿ ವ್ಯಕ್ತಿಯೊಬ್ಬ ರೈಲಿನ ಬೋಗಿಯಲ್ಲಿ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣನಾಗಿದ್ದ. ಬಳಿಕ ಆತನ ಗುರುತು ಪತ್ತೆ ಹಚ್ಚಲಾಗಿತ್ತು. ಈತ ನೋಯಿಡಾ ನಿವಾಸಿ ಎಂದು ಗೊತ್ತಾಗಿದ್ದು, ಈತನ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.

ದುರ್ಘಟನೆ ನಡೆದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಎನ್‌ಐಎ ಈ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿಲ್ಲವಾದರೂ, ಉಗ್ರ ಸಂಚಿನ ಶಂಕೆ ಇರುವ ಯಾವುದೇ ಕೃತ್ಯವನ್ನು ಎನ್‌ಐಎ ಪರಿಶೀಲಿಸುವ ಹಿನ್ನೆಲೆಯಲ್ಲಿ ಇದನ್ನೂ ಪರಿಶೀಲಿಸಲಾಗಿದೆ.

ಬೆಂಕಿ ಹಚ್ಚಿದ ಆರೋಪಿಯನ್ನು ನೋಯಿಡಾ ನಿವಾಸಿ ಶಾರೂಖ್‌ ಸೈಫಿ ಎಂದು ಗುರುತಿಸಲಾಗಿದೆ. ಈತ ಆಲಪ್ಪುರ- ಕಣ್ಣೂರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಿದ್ದ. ಭಾನುವಾರ ರಾತ್ರಿ 9.45ರ ಸುಮಾರಿಗೆ ಕೋರಾಪುಳ ಸೇತುವೆಯಲ್ಲಿ ರೈಲಿನ ಬೋಗಿಯಲ್ಲಿದ್ದ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಬೋಗಿಯಿಂದ ನೆಗೆದು ಪರಾರಿಯಾಗಿದ್ದ. ಇದರಿಂದ 9 ಮಂದಿ ಸುಟ್ಟ ಗಾಯಗಳಿಗೀಡಾಗಿದ್ದರು.

ಇದನ್ನೂ ಓದಿ: Vande Bharat Express | ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಮತ್ತೆ ಅಪಘಾತ; ಹಸು, ಎಮ್ಮೆ ಆಯ್ತು, ಈ ಸಲ ಗೂಳಿಗೆ ಡಿಕ್ಕಿ

ಕೆಲವು ಗಂಟೆಗಳ ಬಳಿಕ, ರೈಲು ಹಳಿಗಳ ಮೇಲೆ ಇದೇ ರೈಲಿನ ಪ್ರಯಾಣಿಕರಾಗಿದ್ದ ಮೂವರ ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ಇವರಲ್ಲಿ ಒಬ್ಬಾಕೆ ಮಹಿಳೆ, ಒಬ್ಬ ಪುರುಷ ಹಾಗೂ ಒಂದು ಮಗುವಾಗಿತ್ತು. ಬೆಂಕಿ ಹಚ್ಚಿದ ಸಂದರ್ಭದಲ್ಲಿ ಭಯಭೀತರಾದ ಇವರು ರೈಲಿನಿಂದ ನೆಗೆದ ಪರಿಣಾಮ ಸತ್ತಿರಬಹುದು ಎಂದು ಶಂಕಿಸಲಾಗಿದೆ.

Exit mobile version