Site icon Vistara News

Nipah Virus: ಕೇರಳದಲ್ಲಿ ನಿಫಾ ವೈರಸ್‌ ಹಾವಳಿ; ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ, ಲಾಕ್‌ಡೌನ್ ಜಾರಿ?

Nipah Virus In Kerala

Kerala's New Nipah Case Takes Total Count To 5, 706 People On Contact List

ತಿರುವನಂತಪುರಂ: ಕೊರೊನಾ ಮಹಾಮಾರಿಯ ಬಾಧೆಯಿಂದ ಜನ ಹೊರಬಂದು, ನಿರ್ಭೀತಿಯಿಂದ ಜೀವನ ಸಾಗಿಸುತ್ತಿರುವ ಬೆನ್ನಲ್ಲೇ ಕೇರಳದಲ್ಲಿ ನಿಫಾ ಸೋಂಕಿನ ಹಾವಳಿ ಜಾಸ್ತಿಯಾಗುತ್ತಿದೆ. ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ಸೋಂಕು (Nipah Virus) ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ನಿಫಾ ಸೋಂಕಿಗೆ ತುತ್ತಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈಗಾಗಲೇ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಜನರಲ್ಲಿ ಆತಂಕ ಜಾಸ್ತಿಯಾಗುತ್ತಿದೆ. ಹಾಗೆಯೇ, ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಸೋಂಕಿತರ ಸಂಪರ್ಕಕ್ಕೆ ಬಂದವರ ಸಂಖ್ಯೆ 700

ಕೇರಳದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದ 706 ಜನರನ್ನು ಅಧಿಕಾರಿಗಳು ಗುರುತಿಸಿದ್ದು, ಇವರಲ್ಲಿ 77 ಜನ ಹೆಚ್ಚು ಅಪಾಯಕಾರಿ (High Risk) ಕೆಟಗರಿಯಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ, ರಾಜ್ಯದಲ್ಲಿ ನಿಫಾ ಸೋಂಕಿತರ ಸಂಖ್ಯೆ ಇನ್ನೂ ಜಾಸ್ತಿಯಾಗುವ ಆತಂಕ ಎದುರಾಗಿದೆ. ನಿಫಾ ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ಹೈರಿಸ್ಕ್‌ ಕೆಟಗರಿಯಲ್ಲಿರುವವರನ್ನು ಗುರುತಿಸಿ, ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 706 ಜನರಲ್ಲಿ 153 ಆರೋಗ್ಯ ಕಾರ್ಯಕರ್ತರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ವರ್ಷದ ಬಾಲಕನ ಸ್ಥಿತಿ ಗಂಭೀರ

ನಿಫಾ ಸೋಂಕಿನಿಂದ ಬಳಲುತ್ತಿರುವವರಲ್ಲಿ 9 ವರ್ಷದ ಬಾಲಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದಾರೆ. “ಒಂಬತ್ತು ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ (ICMR) ಸಿಗುವ ಮೋನೊಕ್ಲೋನಲ್‌ ಪ್ರತಿಕಾಯ ತರಲು ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಸಚಿವೆ ತಿಳಿಸಿದ್ದಾರೆ. ಕಲ್ಲಿಕೋಟೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಒಂಬತ್ತು ಪಂಚಾಯಿತಿಗಳನ್ನು ಕಂಟೇನ್‌ಮೆಂಟ್‌ ವಲಯಗಳು ಎಂಬುದಾಗಿ ಘೋಷಿಸಲಾಗಿದೆ.

ಇದನ್ನೂ ಓದಿ: Nipah Virus: ಕೇರಳದಲ್ಲಿ ನಿಫಾ ವೈರಸ್ ಆತಂಕ; ಚಾಮರಾಜನಗರ ಜಿಲ್ಲೆ ಗಡಿ ಭಾಗದಲ್ಲಿ ಹೈ ಅಲರ್ಟ್

ಕರ್ನಾಟಕದಲ್ಲೂ ಹೆಚ್ಚಿದ ಆತಂಕ

ಕೇರಳ ನೆರೆರಾಜ್ಯವಾಗಿರುವ ಕಾರಣ ಕರ್ನಾಟಕದಲ್ಲೂ ನಿಫಾ ಸೋಂಕಿನ ಭೀತಿ ಹೆಚ್ಚಾಗಿದೆ. ಕೇರಳದಲ್ಲಿ ನಿಫಾ ವೈರಸ್‌ ಸೋಂಕು ವ್ಯಾಪಿಸುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ. ಇನ್ನು ವೆನ್ಲಾಕ್‌ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಿಫಾ ಐಸೋಲೇಶನ್‌ ವಾರ್ಡ್‌ ಮೀಸಲಿರಿಸುವಂತೆ ಸೂಚಿಸಲಾಗಿದೆ. ಮೆದುಳು ಜ್ವರ, ನಿಫಾ ಲಕ್ಷಣಗಳು ಕಂಡುಬಂದರೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Exit mobile version